Friday, 29 July, 2011

ಸಾಗುತ ದೂರ ದೂರ

 ಅವಳು ದೂರದ ಊರಿಗೆ ಕೆಲಸಕ್ಕಾಗಿ ಹೊರಟು ನಿಂತಿದ್ದಳು. ಅವಳ ತಂದೆ ಅವಳನ್ನು ಬಿಟ್ಟು ಬರಲು ಜೊತೆ ಇದ್ದರು. ರೈಲು ನಿಲ್ದಾಣದಲ್ಲಿ, ಅವನಿಗೆ ಕರೆ ಮಾಡಿದಳು. ಅವನಿಲ್ಲಿ ಅವಳು ಹೊರಡುತ್ತಾಳೆ ಎನ್ನುವ ಯಾವ ಅಂಜಿಕೆ, ಯೋಚನೆ, ಪೇಚಾಟ ಏನೂ ಕಾಣಲಿಲ್ಲ. 'ಹೊರಡುತ್ತಿದ್ದೀನಿ ನಾನು. ಕೊನೆಯದಾಗಿ ಇಷ್ಟು ಹೊತ್ತು ಮಾತನಾಡಲು ಆಗೋದು. ಇನ್ನು ಮುಂದೆ ಅಷ್ಟೊಂದೆಲ್ಲ ಖರ್ಚು ಮಾಡಿಕೊಂಡು ಕರೆ ಮಾಡೋಕ್ಕಾಗೋಲ್ಲ." ಎಂದಳು. ಅವಳ ಕಣ್ಣು ತುಂಬಿ ಬಂದಿತ್ತು. ಹೃದಯ ೧೦ ಕಿಲೋ ಅಕ್ಕಿ ಇರೋ ಮೂಟೆ ಆಗಿತ್ತು. 
'ಗೊತ್ತಿರೋ ವಿಷ್ಯ ಅಲ್ವಾ? ಜೀವನ ಬಂದ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು' ಎಂದು ನಿರ್ಭಾವವಾಗಿ ಹೇಳಿದನು. 

ಅವಳಿಗೆ ಅವಳ ಮನಸಿನ ಹಂಬಲ ಗೋಚರಿಸೋ ತೊಡಗಿತ್ತು.. . ಅವನಿಂದ ದೂರ ಹೋಗುತಿದ್ದೀನಿ ಎಂದು ಯೋಚಿಸಿದಾಗೆಲ್ಲ ಹೃದಯ 'ನಾ ನಿನ್ನ ಜೊತೆ ಬರಲಾರೆ' ಎಂದು ಕೀರಲು ಧ್ವನಿಯಲ್ಲಿ ಅಳುತ್ತಿತ್ತು. ಅವಳ ಹೃದಯಕ್ಕೆ ಅವನ ಒಡನಾಟ ಬೇಕಿತ್ತು. ಆದರೆ ಅವನಿಗೆ ಏನೂ ಅನ್ನಿಸೋದೇ ಇಲ್ವಲ್ಲ. ಅವಳ mobile ತೆಗೆದು ಬರೆದಳು

ಬಾಗಿಲು ತೆರೆದಿದೆ, ಕಂಗಳು ಕಾದಿವೆ
ಬರಬೇಕಾದವರು ಬರುವರೇನೋ?
ಮನದ ಕಾವು ತಣಿವುದೇನೋ?
ಅವನ ನೆನಪಲ್ಲೇ ಸವೆದಿದೆ ಜೀವ
ಆ ಸವಿಯಲ್ಲಿ ಮರೆತಿದೆ ನೋವ..
ಒಲವಿನ ಧಾರೆಯು ಬಸಿದು ಹರಿಯುತಿದೆ
ಗುಪ್ತಗಾಮಿನಿಯಾಗಿ ನೆನೆಸಿ, ಮರೆಯಾಗಿದೆ.
ಇದು ಆ ಹೃದಯಕ್ಕೆ ತಿಳಿಯದೆ ಹೋದರೆ?
ಮುನದಲೇ ಚೀರುತಿದೆ ಹೃದಯಾಂತರಾಳದ ಕರೆ

ಬರೆದು ಮುಗಿಸಿದ್ದಳಷ್ಟೇ.. ಅವನ ಕರೆ ಬಂತು.

'ಯಾವ platform ನಲ್ಲಿ ಇದ್ದೀಯ?'
'ಯಾಕೆ? ಇಲ್ಲಿಗೆ ಬಂದಿರೋ ಹಾಗಿದೆ!! ಹೌದಾ?'
'ಕೇಳಿದಕ್ಕೆ ಉತ್ತರಿಸು'
'೫'
'ಸೀದಾ ಬಾ.. Gate ಹತ್ತಿರ'

ಅವಳ ಕಿವಿಯನ್ನ ಅವಳೇ ನಂಬಲಾಗಲಿಲ್ಲ.. ಅವನು ಬಂದಿದ್ದ!! ಅವಳನ್ನ ಬೀಳ್ಕೊಡಲು. ಅವಳ ಅಪ್ಪನಿಗೆ ಇಲ್ಲೇ ನನ್ನ ಗೆಳೆಯರು ಬಂದಿದ್ದಾರೆ, ಹೋಗಿ ಬರುತ್ತೇನೆಂದು ಹೇಳಿ ಓಡಿದಳು.. ಯಾವುದೊ ದೊಡ್ಡ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಅವಳ ಹೆಸರು ಕರೆದಾಗ ಆಗೋ ಅನುಭವ ಅವಳಿಗೆ.. ಅವಳ ಪಾಲಿಗೆ ಅವನೇ 'ಜೀವನ' 

ಅವನು ಅವಳನ್ನು ಕಂಡೊಡನೆ ನಕ್ಕ.. ಇವಳಿಗೆ ಹಿಗ್ಗೋ ಹಿಗ್ಗು.. 'ಹುಷಾರಾಗಿ ಹೋಗಿ ಬಾ' ಎಂದ.. ಸರಿ ಎಂದು ತಲೆ ಅಲ್ಲಾಡಿಸಿದಳು.. ಮಾತೇ ಹೊರಡಲಿಲ್ಲ.. !  

5 ಅನಿಸಿಕೆ ಅಭಿಪ್ರಾಯ:

ಗಿರೀಶ್.ಎಸ್ said...

ಜೀವನ ಹರಿಯೋ ನೀರು ಹಾಗಬೇಕು..ನಿಂತ ನೀರು ಹಾಗಬಾರದು... ಅವಳು ಮುಂದೆ ಸಾಗುವುದು ಅನಿವಾರ್ಯ..ಅವನು ಬೀಳ್ಕೊಡುವುದು ಅವನ ಔದಾರ್ಯ......

ಆದರು ಸಹನಾ ನೀವು ಬರೆದಿರುವ (ಬಾಗಿಲು ತೆರೆದಿದೆ.... ಕರೆ) ಸಾಲುಗಳು ಅನುಭವಿಸಿ ಬರೆದಿರುವ ಆಗಿದೆ... ಸಖತ್ !!!

Spicy Sweet said...

ಎಷ್ಟು ಸುಂದರ ಅನಿಸಿಕೆಯನ್ನು ಬರೆದಿದ್ದೀರ ಗಿರೀಶ್.. ನಿಜವಾಗಿಯೂ ಇಷ್ಟ ಆಯ್ತು..
ಪಾತ್ರದಲ್ಲಿ ಮುಳುಗಿ ಎದ್ದರೇನೆ, ಪಾತ್ರಕ್ಕೆ ಜೀವ ಬರುವುದು ಎನ್ನುವುದು ನನ್ನ ನಂಬಿಕೆ.. :) ಬಹಳ ಸಂತೋಷ ಆಯ್ತು..

Prashanth said...

ಭಾವನೆಗಳೆಲ್ಲವೂ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ಬರೆದಿದ್ದೀರಿ. ಸಹನಾ, ಉತ್ತಮ ಬರವಣಿಗೆ!

ಪ್ರವರ ಕೆ ವಿ said...

ಹೃದಯ ೧೦ ಕಿಲೋ ಅಕ್ಕಿ ಇರೋ ಮೂಟೆ ಆಗಿತ್ತು..... ತಿಳಿ ಹಾಸ್ಯ ಇಷ್ಟವಾಯ್ತು.... ಬರೆಯುತ್ತಿರಿ ಹೀಗೆ,,,,,

ಸೀತಾರಾಮ. ಕೆ. / SITARAM.K said...

ಚೆಂದದ ಲೇಖನ!