Wednesday 24 October, 2012

ಗತಕಾಲ ವೈಭವ

ಅಂದು ಭಾನುವಾರ. ವಿದೇಶದಿಂದ ಗೆಳೆಯರೊಬ್ಬರು ಬಂದಿದ್ದರು. ಅವರಿಗೆ ನಮ್ಮ ದೇಶದ ಬಗ್ಗೆ ತಿಳಿದುಕೊಳ್ಳೋ ಆಸಕ್ತಿ. "ವಿಶ್ವ ಭೂಪಟದ ಮೇಲೆ ಇರುವ ದೇಶಗಳಿಗಿಂತ ಭಾರತ  ಹೇಗೆ ವಿಭಿನ್ನ?" ಎಂದು ಕೇಳಿದರು. ನಾನು ನಮ್ಮ ಅಖಂಡ ಭಾರತದ ಭವ್ಯ ಚರಿತೆ, ಏಕತೆಯಲ್ಲಿ ಅನೇಕತೆ, ನಮ್ಮ ಸಂಗೀತ, ಸಾಹಿತ್ಯ, ಕಲೆ ಬಗ್ಗೆ ಎಲ್ಲಾ ಹೇಳಿ ಕೊಂಡಾಡಿದೆ. ಅವರು ಖುಷಿ ಪಟ್ಟರು. ಆದರೆ, ಎನ್ನ ಮನಸಿನ ಒಂದು ಅಂಚಿನಲ್ಲಿ ಅಪರಾಧಿ ಮನೋಭಾವ ಕಾಡತೊಡಗಿತು.

ನಮ್ಮ ದೇಶ ಭೂರಮೆಯಲ್ಲೇ ಹೇಗೆ ಶೋಭಾಯಮಾನವಾಗಿ ಬೆಳಗುತ್ತದೆ ಎಂದು ತಿಳಿಸಲು ನಾವು ನಮ್ಮ ಪೂರ್ವಜರು ಮಾಡಿದ ಸಾಧನೆಯನ್ನು ನೆನೆಯಬೇಕು. ನಮಗೆ ಉಳಿದಿರುವುದು ಗತಕಾಲ ವೈಭವ ಅಷ್ಟೇ. ಈ ಸಂಸ್ಕೃತಿ ಉಳಿಸಲು, ಬೆಳೆಸಲು ಶತಮಾನದ  ಕೊಡುಗೆ ಏನು? ಎಂದು ನೆನೆದರೆ, ಸಿಗುವ ಉತ್ತರಗಳು ಬೆರಳೆಣಿಕೆಯಷ್ಟೇ ಇರಬಹುದು. ಇಂದಿನ ಜೀವನದ ಗತಿಯಲ್ಲಿ ಯಾವುದಕ್ಕೂ ಬೆಲೆ ಇಲ್ಲ. ನಮ್ಮ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಉಳಿಸುವುದು ಬಿಡಿ, ತಿಳುವಳಿಕೆಗೂ ಬರಗಾಲ. ಇನ್ನ ಬೆಳವಣಿಗೆ ಅಂತೂ ಅಂಗವೈಕಲ್ಯದಿಂದ ಬಳಲುತ್ತಿದೆ. ಭಾರತಾಂಬೆಯ ಪುಣ್ಯದ ಬುತ್ತಿ ಇನ್ನ ತುಂಬಿರುವುದರಿಂದ ಕೆಲವು ಮಹಾಶಯ, ಮಹಾನೀಯರು ನಮ್ಮ ಸಂಸ್ಕೃತಿಗೆ ಉಸಿರು ತುಂಬುತ್ತಿದ್ದಾರೆ.

ಭಾರತದ ಬಗ್ಗೆ ಮಾತಾಡುವುದು ಭಾರಿಯಾಗುತ್ತದೆ. ನಮ್ಮ ಪುಟ್ಟ ಕರ್ನಾಟಕ ರಾಜ್ಯದ ಸಂಸ್ಕೃತಿಯ ಒಂದು ಸಣ್ಣ ಭಾಗವಾದ ನೃತ್ಯದ ಬಗ್ಗೆ ಕಣ್ಣು ಹಾಯಿಸೋಣ. ನಮ್ಮಲ್ಲಿ ಇರೋ ಕುಣಿತಗಳು ಎಷ್ಟು?  ಡೋಲು ಕುಣಿತ, ಕಂಸಾಳೆ ನೃತ್ಯ, ಸೋಮನ ಕುಣಿತ, ಸುಗ್ಗಿ ಕುಣಿತ, ಜಗ್ಗಹಲಿಗೆ ಕುಣಿತ, ಕರಡಿ ಮಜಲು, ಗೊಂದಲಿಗರ ಆಟ, ಭೂತ ಆರಾಧನೆ, ಯಕ್ಷಗಾನ, ಹಗಲು ವೇಷಗಾರರು, ಗೊರವರ ಕುಣಿತ, ನಾಗಮಂಡಲ, ಕರಗ, ಗಾರುಡಿ ಗೊಂಬೆ, ಜೋಡು ಹಳಿಗಿ, ವೀರಗಾಸೆ ನೃತ್ಯ ಇತ್ಯಾದಿ ಇತ್ಯಾದಿ. ರಾಜ್ಯದ ವಿವಿಧೆಡೆ, ವಿವಿಧ ಜನಾಂಗಗಳಲ್ಲಿ ಈ ನೃತ್ಯ ಪ್ರಕಾರಗಳು ಬೆಳೆದುಕೊಂಡು ಬಂದಿದೆ. ಅಮೇರಿಕೆ ಏನಾಗುತ್ತಿದೆ ಎಂದು ಕ್ಷಣ ಮಾತ್ರದಲ್ಲಿ ತಿಳಿಯುವ  ಈ ಯುಗದಲ್ಲಿ, ನಮ್ಮ ರಾಜ್ಯದಲ್ಲಿ ಇರುವ ನೃತ್ಯಗಳು ಯಾವುವು ಎಂದು ತಿಳಿದಿಲ್ಲ ಎಂದರೆ ವಿಪರ್ಯಾಸವೇ ವಿನಃ ಮತ್ತೇನು ಅಲ್ಲ. ಈ ವರ್ತನೆಗೆ ಕಾರಣವೇನು ಎಂದು ಯೋಚಿಸಿದರೆ ಸಿಗುವ ಸುಲಭ ಉತ್ತರ ನಿರಾಸಕ್ತಿ. 

ಈ ಎಲ್ಲಾ ಜಾನಪದ ಕಲೆಗಳು ಜನಜೀವನದ ಅವಿಭಾಜ್ಯ ಅಂಗವಾಗಿ ಮೆರೆಯುತಿತ್ತು. ಹಳ್ಳಿಯ ಬದುಕನ್ನು ಶ್ರೀಮಂತಗೊಳಿಸುತಿದ್ದ ಸಂಪತ್ತು ಇವು. ಜಾತ್ರೆ-ಉತ್ಸವಗಳಲ್ಲಿ, ಮದುವೆ-ಸಮಾರಂಭಗಳಲ್ಲಿ ಈ ಕಲೆಗಳಿಗೆ ಪ್ರೋತ್ಸಾಹ ಸಿಗುತಿತ್ತು. ಕಲಾವಿದರಿಗೆ ಜೀವನ ನಡೆಸುವಷ್ಟು ಸಂಭಾವನೆಗೂ ಕಡಿಮೆ ಇರಲಿಲ್ಲ. ಹಳ್ಳಿಗಳು ಪ್ರಗತಿಯ ಪಥ ತುಳಿಯುವ ಹುಮ್ಮಸ್ಸಿನಲ್ಲಿ ಈ ಕಲೆಗಳನ್ನು ಪಯಣದ ಹಾದಿಯಲ್ಲಿ ತುಸು ಭಾರವಾಗುವ ಸಾಮಾನು ಎಂದು ಬಿಟ್ಟು ಹೋದವರೇ ಹೆಚ್ಚು. ಜನರು "ಸಮಯದ ಅಭಾವ"ದಿಂದ ಈ ಕಲಾವಿದರನ್ನು ತಮ್ಮ ಸಂಭ್ರಮಗಳಲ್ಲಿ ಭಾಗಿ ಮಾಡಿಕೊಳ್ಳುವುದನ್ನು ಬಿಟ್ಟರು. ಕಲೆಯನ್ನೇ ನಂಬಿ ಜೀವನ ಮಾಡುವವರ ಹೊಟ್ಟೆಗೆ ಭಾರಿ ಎಟೆ ಬಿಟ್ಟು. ಹಲವು ಕಲಾವಿದರು ತಮ್ಮ ಮಕ್ಕಳಿಂದ ಈ ಕಲೆ ಮುಂದುವರಿಸಲು ಇಚ್ಚಿಸಲೇ ಇಲ್ಲ. (ಈ ಕಲೆಗಳು ಪಾರಂಪರಿಕವಾಗಿಯೇ ಬೆಲಿಯುದು ಹೆಚ್ಚು). ಅದನ್ನು ತಪ್ಪು ಎನ್ನುವುದೂ ಸಾಧ್ಯವಿಲ್ಲ. ಈ ಭೂಮಿಯಲ್ಲಿ ಇರೋ ಪ್ರತಿಯೊಬ್ಬ ತಂದೆ ತಾಯಿಯ ಆಸೆ, ಮಕ್ಕಳು ಸುಖವಾಗಿ ಇರಬೇಕೆಂದು. ಹೀಗೆ ನೃತ್ಯ ಕಲೆ ಅವನತಿಯ ಪಥ ಹಿಡಿದಿದೆ. ಮತ್ತೆಲ್ಲಾ ಕ್ಷೇತ್ರಗಳಲ್ಲೂ ಸದೃಶ ಕಥೆಯೇ! 
ಸಂಸ್ಕೃತಿ ಎಂಬುವುದು  ಪ್ರಕೃತಿ ಸಹಜ ರೀತಿಯಲ್ಲಿ ಬೆಳೆದಿರುತ್ತದೆ. ಅಲ್ಲಿನ ಜನರ ಆಹಾರ ಪದ್ದತಿಗಳಾಗಲಿ, ಮನೋರಂಜನಾ ಕಲೆಗಳಾಗಿಲಿ, ಹಾಡು-ಕುಣಿತಗಲಾಗಲಿ,  ದೇವರ ಕಲ್ಪನೆಯಾಗಲಿ, ವಸ್ತ್ರ-ವಿನ್ಯಾಸವಾಗಲಿ.. ಪ್ರತಿಯೊಂದನ್ನೂ ಆ ಸ್ಥಳಕ್ಕೆ ಅನುಗುಣವಾಗಿ ಸಮಾಜ ಹೆಣೆದುಕೊಂಡು ಬಂದಿರುತ್ತದೆ.ಪರ ಸಂಸ್ಕೃತಿಯಿಂದ ಪ್ರೇರಿತರಾಗುವುದು ಸಹಜವೇ. ಆದರೇ, ನಮ್ಮ ಬದುಕಿಗೆ ಹೊಂದುತ್ತದೆಯೇ ಇಲ್ಲವೇ ಎಂದು ಪರಾಮರ್ಷೆಯೇ ಮಾಡದೆ ಕುರುಡು ಅನುಚರಣೆ ಮಹಾ ಅಪರಾಧ. ಪರಕೀಯ ಪ್ರಭಾವದಿಂದ ಈ ಎಲ್ಲಾ ರೀತಿ-ನೀತಿಗಳು ಬದಲಾದರೆ ಹುಲಿಯನ್ನು ಕಂಡು ನರಿ ಬರೆ ಹಾಕಿಕೊಂಡಂತೆ ಆಗುತ್ತದೆ. ಬಾರೆ ಹಾಕಿಕೊಂಡ ನರಿ ಕೊನೆಗೆ ನರಿಯ ಹಾಗೂ ಕಾಣುವುದಿಲ್ಲ, ಹುಲಿಯ ಹಾಗೂ ಕಾಣುವುದಿಲ್ಲ. ಎರಡೂ ಕಡೆ ನಿಲುವಿರದೆ ದುರ್ಬರ ಪರಿಸ್ಥಿತಿ ಎದುರಾಗುತ್ತದೆ. ಭಾರತ ವರ್ಷ ಭೂಪಟದಲ್ಲಿ ಕಂಗೊಳಿಸದೇ, ಕಂಗಾಲಾಗಿ ಕಾಣುತ್ತದೆ.
       
ನಮ್ಮ ಸಂಭ್ರಮಗಳಲ್ಲಿ ನಮ್ಮ ಕಲೆಗಳನ್ನು ಮೆರೆಸಿ ಒಂದು ಹೊಸ ಪ್ರವೃತ್ತಿ ಸೃಷ್ಟಿಸಬೇಕು.ನಮ್ಮ ಅಭಿಮಾನಕ್ಕೆ ವಾಕ್ಬಲ ಕೊಟ್ಟು ಪ್ರಚಾರಗಿತ್ತಿಸಬೇಕು. ಹೀಗೆ ಮಾಡಿದ್ದಲ್ಲಿ  ಕಲಾವಿದರಿಗೆ ನೈತಿಕ ಹಾಗೂ ಆರ್ಥಿಕ ಬೆಂಬಲ ದೊರೆಯುತ್ತದೆ. ನಾಟಕ ಶಾಲೆಯ ತರಹ, ನೃತ್ಯ ಶಾಲೆಗಳು ಆರಂಭವಾಗುತ್ತದೆ. ನೃತ್ಯ, ನಾಟಕ, ಕಲೆ, ಸಾಹಿತ್ಯ ಎಲ್ಲಾ ಜೀವನ ನಡೆಸಲು ಒಂದು ಮಾರ್ಗ ಎಂದು ಜನರಿಗೆ ನಿಧಾನವಾಗಿ ಮನನ ಆಗುತ್ತದೆ.   

ನಮಗೆ ನಮ್ಮತನದ ಬಗ್ಗೆ ಅಭಿಮಾನವಿಲ್ಲದಿರೆ, ಮತ್ತಾರಿಂದ ಅಪೇಕ್ಷಿಸಲು ಸಾಧ್ಯ? ಇಡೀ ಭೂಮಂಡಲದಲ್ಲಿ ಅತ್ಯಂತ ಪ್ರಾಚೀನ ನಾಗರೀಕತೆಯ ಎಂಬ ಹೆಗ್ಗಳಿಕೆ ಒಂದೇ ಸಾಕೆ? ಆ ನಾಗರೀಕತೆ ವಿಕಸನ ಆಗಿದೆ, ಆಗಬೇಕು. ಆ ವಿಕಸನ ಪ್ರಕೃತಿ ಸಹಜವಾಗಿ ಇರಲಿ. ಅನುಕರಣೆ ಬೇಡ. ನಮ್ಮ ಸಂಸ್ಕೃತಿ, ನಮ್ಮತನದ ಬಗ್ಗೆ ನಮಗೆ ಹೆಮ್ಮೆ ಇರಲಿ. ಅದನ್ನು ಉಳಿಸುವ, ಆದರೆ ಬೆಳೆಸುವ ಪ್ರಯತ್ನ ಮಾಡೋಣ. ನಮ್ಮ ಮಕ್ಕಳಿಗೆ ಈ ಭವ್ಯ  ಭಾರತ ಇಂದಿಗೂ ವೈಭವಾಗಿದೆ ಎಂದು ತಿಳಿಸುವ ಸುಯೋಗ ನಮಗಿರಲಿ. 

Saturday 19 November, 2011

ಜಿ.ಪಿ. ರಾಜರತ್ನಂ

ಬಾಲ್ಯದ ನೆನಪಲ್ಲಿ "ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?" ಹಾಡು ಅಚ್ಚು ಉಳಿದಿರಬೇಕು ಅಲ್ಲವೇ? ಆ ಕಂದ-ಪದ್ಯವನ್ನು ಬರೆದವರು ಯಾರು? 
ಜಿ.ಪಿ. ರಾಜರತ್ನಂ. 
ಆ ವ್ಯಕ್ತಿ ಹೇಗೆ ಮಕ್ಕಳ ಪದ್ಯವನ್ನು ಬರೆಯಲು ನಾಂದಿ ಹಾಡಿದರು ಎಂಬುವುದರ ಬಗ್ಗೆ, ಕಹಳೆಯಲ್ಲಿ ಬರೆದಿದ್ದೇನೆ. ಓದಿ ತಿಳಿಸಿ.. ಹೇಗಿದೆ ಎಂದು.. 


http://www.kahale.gen.in/2011/11/blog-post_18.html

Monday 10 October, 2011

ಮತ್ತೂರುಜಿ

ಅಕ್ಟೋಬರ್ ,೨೦೧೧ ಜಗತ್ತೆಲ್ಲ ಸ್ಟೀವ್ ಜಾಬ್ಸ್ ತೀರಿಹೋದ ದುಖದಲ್ಲಿ ಮುಳುಗಿದ್ದರೆನನಗೆ ಬೇಸರ ತಂದ ಇನ್ನೊಂದು ಸಾವು ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಗಳದ್ದು. ಹಿರಿ ಜೀವಕೊನೆಯ ದಿನದವರೆಗೆ ಅಕ್ಷರಶಃ "ಬದುಕಿದ" ವ್ಯಕ್ತಿ.
ನನ್ನ ನೆಚ್ಚಿನ ಪ್ರವಚನಕಾರ.

ಶಿವಮೊಗ್ಗ ಜಿಲ್ಲೆಯ , ಮತ್ತೂರು ಎಂಬ ಸಣ್ಣ ಹಳ್ಳಿಯಲ್ಲಿ ರಾಮಕೃಷ್ಣಯ್ಯ ಮತ್ತು ನಂಜಮ್ಮ ಎಂಬ ದಂಪತಿಗಳ ಎಂಟನೆ ಮಗುವಾಗಿ ಜನಿಸಿದರು. ಬಡ ಬ್ರಾಹ್ಮಣ ಕುಟುಂಬ. ತಿನ್ನಲು ಹಿಡಿ ಅನ್ನಕ್ಕೂ ಒದ್ದಾಡಿದ ದಿನಗಳೂ ಕಳೆದರು. ವಾರಾನ್ನ ತಿಂದು ವಿದ್ಯಾರ್ಥಿ ಜೀವನ ಕಳೆದರು. ಮುಂದೆ ಮದರಾಸಿಗೆ ಹೋಗಿ ಉನ್ನತ ವ್ಯಾಸಂಗ ಮುಗಿಸಿದರು. ಮನೆಯ ಕಷ್ಟಗಳಿಗೆ ತಲೆ ಬಾಗಿ   ಮತ್ತೆ ಶಿವಮೊಗ್ಗಗೆ ಮರಳಿದರು. ಯಾವುದೋ  ಗಿರಣಿಯಲ್ಲಿ ಸಮಯ-ಕಾಯೋ ಕೆಲಸ ಮಾಡಿದರು, ಮತ್ತೆ ಬಸ್ inspector ಆಗಿ ಕೆಲಸ ಮಾಡಿದರು, ಅದಾದ ಮೇಲೆ ಅವರು ಭಾರತೀಯ ವಿದ್ಯಾ ಸಂಸ್ಥೆ ಸೇರಿ ಲಂಡನ್ನಲ್ಲಿ ಸೇವೆ ಸಲ್ಲಿಸಲು ತೆರಳಿದರು. ಈಗ, ಭಾರತೀಯ ವಿದ್ಯಾ ಸಂಸ್ಥೆ ಎಂದರೆ ಮತ್ತೂರು ಕೃಷ್ಣಮೂರ್ತಿಗಳು ಎನ್ನುವ ಮಟ್ಟಿಗೆ ಬೆಳೆಸಿದ್ದಾರೆ.

ಅವರ ಭಾರತೀಯತೆ ಬಗೆಗಿನ ಹೆಮ್ಮೆ, ಸಂಸ್ಕೃತಿಯ ಬಗ್ಗೆ ಅಭಿಮಾನ, ಪ್ರವಚನಗಳು, ಕುಮಾರವ್ಯಾಸ ಭಾರತದ ವಾಚನ, ನವರಸಗಳ ಉಪಯೋಗ, ಬರೆದ ೪೦ಕ್ಕು ಹೆಚ್ಚು ಹೊತ್ತಿಗೆಗಳು ಬಗ್ಗೆ ಎಷ್ಟು ಬರೆದರೂ ಕಡಿಮೆಯೇ ! ಅವರ ಬಗ್ಗೆ ತಿಳಿಯದಿದ್ದವರು ಅವರ ಬಗ್ಗೆ ಓದಿ. ಅವರ ಪುಸ್ತಕಗಳನ್ನು ಓದಿ, ಅವರ ಪ್ರವಚನ ಕೇಳಿ. 

ನನಗೆ ಇಷ್ಟವಾದ ಕೆಲವು ಅವರ ನಿಲುವುಗಳು ಪಟ್ಟಿ ಮಾಡಿದ್ದೀನಿ.  
·  ನಮಗೆ ಬೇರೆ ಸಂಸ್ಕೃತಿಯ ಮುಂದೆ ನಮ್ಮದು ಅಲ್ಪ ಎನಿಸುವುದುದಕ್ಕೆ ಕಾರಣ ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಮ್ಮ ಸೋಲು

·  ಬೇರೆಯ ಸಂಸ್ಕೃತಿಯಿಂದ ದೂರವಿರೋದು ಸರಿಯಿಲ್ಲ, ಆದರೆ ನಮ್ಮ ಸಂಸ್ಕೃತಿಯ ಬಲಗಳನ್ನೂ ತಿಳಿದಿರಿ

·  ವಿಶಾಲ ಹೃದಯ ಮತ್ತೆ ಉನ್ನತ ಯೋಚನೆ ಇಡಿ ಜಗತ್ತನ್ನ ಒಂದೇ ಸಂಸಾರ ಮಾಡುತ್ತದೆ.

·  ಬಡತನವೇ ನನ್ನ ಯಶಸ್ಸಿನ ಹಾದಿಯಾಯಿತು

·  ಬಡತನವು ನನಗೆ ವರವಾಗಿ ಬಂತು, ಕಷ್ಟದ ಹಾದಿಗೆ ಸೋಪಾನವಾಯಿತು, ಕ್ಲಿಷ್ಟತೆಯನ್ನು ಧೈರ್ಯದಿಂದ ಎದುರಿಸಿ ಗೆಲ್ಲುವ ಹುಮ್ಮಸ್ಸು ಕೊಟ್ಟಿತು.

·  ಜನ ನಿಮ್ಮನ್ನು ಗೌರವಿಸುವುದು ನೀವು ನಿಮ್ಮ ಭಾರತೀಯತೆ ಉಳಿಸಿಕೊಂಡರೆ, ಬೇರೆಯನ್ನು ಅನುಕರಣೆ ಮಾಡಿದರೆ ಅಲ್ಲ.

·  ಮಕ್ಕಳಲ್ಲಿ ಮೌಲ್ಯ ಬೆಳಸುವುದು ತಂದೆ-ತಾಯಿಯರ ಕರ್ತವ್ಯ. ಸ್ವಲ್ಪ ತ್ಯಾಗವೂ ಅತ್ಯವಶ್ಯಕ.

·  ಜೀವನದ ಜಂಜಾಟದಲಿ, ಮಕ್ಕಳಲ್ಲಿ ಮೌಲ್ಯ ತುಂಬಲು ಮರೆತರೆಅವರ ಜೀವನ ನಾಶ ಮಾಡುವುದಲ್ಲದೆ, ನಿಮ್ಮ ಮಕ್ಕಳನ್ನೂ ಜೀವನದಲ್ಲಿ ಸೋಲಿಸಿ ಬಿಟ್ಟೀರಿ ಜೋಕೆ!   


·   ಬ್ರಿಟಿನ್ ರಾಣಿಯ ಜೊತೆ ಕೈ ಕುಲುಕಿದ್ದರೆನಮ್ಮ ಸಂಸ್ಕೃತಿಯ ಬಗ್ಗೆ ಅವರಿಗೆ ತಿಳಿಸುವ ಸಂದರ್ಭವೇ ಬರುತ್ತಿರಲಿಲ್ಲ." (ಕೈ ಕುಲುಕಲು ರಾಣಿಯು ತನ್ನ gloves ತೆಗಿಯುತ್ತಿರುವಾಗ ಇವರು ಎರಡೂ ಕೈ ಜೋಡಿಸಿ ಮುಗುಳ್ನಗುತ್ತ ನಿಂತಿದ್ದರು. ಚಕಿತಳಾದ ರಾಣಿನಮಸ್ತೆ"ಯ ಬಗ್ಗೆ ಕೇಳಿ ತಿಳಿದುಕೊಂಡರು )

ಆ ಮಹಾನ್ ಮನುಷ್ಯನ ಹುಟ್ಟಿದ ನಾಡಲ್ಲಿ ಹುಟ್ಟಿರೋದು ನನ್ನ ಪುಣ್ಯ!  ಮಹನೀಯರೇ, ಎಲ್ಲಿದ್ದೀರೋ ಏನೋ, ನಿಮ್ಮ ದೇಹ ಅಲ್ಪಾಯುವಾದರು, ನಿಮ್ಮ ನೆನಪು, ಸಾಧನೆ ಚಿರಾಯು!



Wednesday 28 September, 2011

ಖರೀದಿ


 ಗಂಡ ಹೆಂಡರು ಹೊರಟರು ಖರೀದಿಗೆ,

ಬೇಕೆಂದಿದ್ದಳು ಅವಳು ಬಟ್ಟೆಬರೆ.

ಖರೀದಿಯ ನಂತರ ಹೆಂಡತಿಗೆ ಬಟ್ಟೆ,
ಗಂಡನಿಗೆ ಬಿಲ್ಲಿನ ಬರೆ!!

Monday 5 September, 2011

ಒಂದು ಕ್ಷಣದ ನಿರ್ಲಕ್ಷ್ಯ, ನಷ್ಟವಾಗುವುದು ಲಕ್ಷ

ನನ್ನ 'ಲ್ಯಾಪ್ಟಾಪ್' ನ  ಕರುಳ ಬಳ್ಳಿಯ (cord) ಮೈ ಸುಕ್ಕಾಗತೊಡಗಿತು. ಪದೇ ಪದೇ ಮೈ ಬಿಸಿಯಾಗುತ್ತಿತ್ತು , ಆಗ 'ಇಂದು ನೀನೇನು ಕೆಲಸ ಮಾಡಬೇಡ' ಎಂದು ಮಲಗಿಸಿಬಿಡುತಿದ್ದೆ. ಸೂಕ್ಷ್ಮವಾಗಿ ಹೇಳುತ್ತಿತ್ತು.. 'ನಾನು ಸಾಕಷ್ಟು ಸವೆದಿದ್ದೀನಿ,   ಬೇರೆ ಯಾರನ್ನಾದರೂ ನೋಡಿಕೋ ಎಂದು ನಿಟ್ಟುಸಿರು ಬಿಡುತ್ತಲೇ ಇತ್ತು.. ' 

'ಈಗ ನಿನ್ನ ಪುರಾಣ ಕೇಳುವುದಕ್ಕೆಲ್ಲ ಸಮಯವಿಲ್ಲ, ನನಗೆ ಕಚೇರಿಗೆ ತಡವಾದಾಗ್ಲೆ ನಿನ್ನ ಗೋಳು ಶುರು ಮಾಡುತ್ತೀಯ' ಎಂದು ರೇಗಿದೆ. ನೀನು ಮನೆಗೆ ಬಂದ ಮೇಲೆ ನನ್ನ ಮಾತು ಕೇಳೋಲ್ಲ, ಸುಮ್ನೆ ನನ್ನ ಎಳೆದಾಡಿ, ನನಗೆ ಶಾಕ್ ಕೊಡಿಸುತ್ತೀಯ, ನಿನ್ನ ಲ್ಯಾಪ್ ಟಾಪ್ ನ ಚೇತನ ಜೀವಂತ ಇರಿಸಲು, ಆಮೇಲೆ ಕೇಳೋದೇ ಬೇಡ, ನಿನ್ನ ಬ್ಲಾಗ್, ನಿನ್ನ ಫೇಸ್ ಬುಕ್ , ನಿನ್ನ ಜೀಮೇಲ್, ನನ್ನ ಒದ್ದಾಟ ಕಾಣುವುದೇ ಇಲ್ಲ' ಎಂದು cord ಹೇಳಿಯೂ ಮುಗಿಸಿರಲಿಲ್ಲ.. ನಾನು ಕೋಣೆ ಇಂದ ಹೊರಗೆ ನಡೆದೇ.


ಮನೆಗೆ ಬರುವುದು ೬.೩೦ ಆಗಿತ್ತು. ಅಮ್ಮ ಚಕ್ಕುಲಿ ಮತ್ತೆ ಕಾಫಿ ಕೊಟ್ಟರು, ಚಕ್ಕುಲಿ ಕಟ-ಕಟನೇ ಕಡಿಯುತ್ತಾ, ಲ್ಯಾಪ್ ಟಾಪ್ 'on ' ಮಾಡಿದೆ. 'ON ' ಆಗಲೇ ಇಲ್ಲ! ಇದೇನಪ್ಪ ಆಯಿತು ಎಂದು, 'cord ಅನ್ನು power -socket ಬಾಯಿಗೆ ಇಟ್ಟೆ.. ಅದು ಉಸಿರು ತುಂಬಿ ಜೀವ ಕೊಡುತ್ತದೆ ಎಂದು. ಊಹ್ಞೂ.. ಎನೂ ಆಗಲಿಲ್ಲ.. ಗಾಬರಿಯಾಯಿತು.. ನನ್ನ ಫೋನ್ charger ಹಾಕಿ ಫೋನ್ ಸಿಕ್ಕಿಸಿದೆ, charge ಆಗುತಿತ್ತು.. ಅಂದರೆ ನನ್ನ ಪ್ರೀತಿಯ cord ನ ಉಸಿರು ನಿಂತು ಹೋಯಿತೇ? ಆಗ ಒಳಗಿನ ಮನಸ್ಸು ಕುಪಿತಗೊಂಡಿತು.. ' ಸಾಕು ನಾಟಕ ನಿಂದು, 'ಪ್ರೀತಿಯ' ಅಂತೆ! ನಿನ್ನ ಲ್ಯಾಪ್ ಟಾಪ್ ನೋಡೋಕ್ಕೆ ಆಗೋಲ್ಲ ಎಂದು ನಿನಗೆ ಬೇಸರವಾಗಿದಿಯೇ ಹೊರತು cord ಹೋಯಿತು ಎಂದು ಅಲ್ಲ.
Cord ಜೊತೆ ನಿನ್ನ ಲ್ಯಾಪ್ ಟಾಪ್ ಕೂಡ ಸತ್ತ ಹಾಗೆಯೇ. ' ನಾನು ಮೌನದಿಂದ ತಲೆ ಬಾಗಿದೆ.

ನನ್ನ ಎಷ್ಟೋ file ಗಳು, ಎಷ್ಟೋ ವರ್ಷದ documents ಗಳು, ಚಿತ್ರಗಳು ಎಲ್ಲ ಆ ಬೃಹದಾಕಾರದ ಲ್ಯಾಪ್ ಟಾಪ್ ದೇಹದಲ್ಲಿ ಹೂತುಹೋಗಿತ್ತು. ಈಗ ಅದನ್ನು ಹೇಗಾದರು ಮಾಡಿ ಮರಣೋತ್ತರ ಪರೀಕ್ಷೆ ಮಾಡಿಸಿ ಆದರೂ  ಹೊರ ತೆಗಿಸಬೇಕಿತ್ತು. ನಿಧಿ ಯಾರದೋ ದೇಹದಲ್ಲಿ ಬಚ್ಚಿಟ್ಟು ಅವರು ಸತ್ತ ಹಾಗೆ ಆಯಿತು ನನ್ನ ಪರಿಸ್ಥಿತಿ. ಗೊತ್ತಿರುವವರನ್ನ ಕೇಳಿದೆ. 
ನನ್ನ ಹಳೆಯ Cord ಈಗ ಮಾರುಕಟ್ಟೆಯಲ್ಲೇ ಇಲ್ಲವಂತೆ. ಬೇರೆಯಾವುದು ಇದಕ್ಕೆ ಸರಿ ಹೊಂದುವುದಿಲ್ಲವಂತೆ.. 



ಸರಿ.. ಯಾವುದೋ ಚೀನೀ ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂದು, ಒಂದು ಭಾನುವಾರವೆಲ್ಲ ಮಳೆ, ಚಳಿ, ಗಾಳಿಯಲ್ಲಿ ಅಲೆದು, ಒಂದು Cord ತಂದೆ. ಅದರಿಂದ ಜೀವ ಏನೋ ಬಂತು, ಆದರೆ ಅದು ಮೊದಲ ಭಾರಿಯೇ ಜ್ವರದಿಂದ ಬಳಳಲು ಶುರು ಮಾಡಿತ್ತು.. ಈ ಭಾರಿ ಹುಷಾರಗಿದ್ದೆ. ನನ್ನ data ಎಲ್ಲ Hard-disk drive ಗೆ ರವಾನಿಸಬಿಟ್ಟೆ. ಮುಂದಿನ ದಿನ  ಅದೂ  ಅಸುನೀಗಿತ್ತು.

ಒಂದು ಪಾಠವಂತೂ ಕಲೆತೆ. 'ಒಂದು ಕ್ಷಣದ ನಿರ್ಲಕ್ಷ್ಯ, ನಷ್ಟವಾಗುವುದು ಲಕ್ಷ' 
  

Tuesday 30 August, 2011

ಪಂಡಿತರ ಉವಾಚ - ೧


ಖನ್ನಡ ಮಾತೆ ಹೃದಯ ಅಂತು ಒಡೆದು ವೋಯಿತು



Wednesday 17 August, 2011

ನಿನ್ನ ಮೂಗು ಎಲ್ಲಿ?

ಮೂಗು ತೋರಿಸು ಅಂದ್ರೆ ಹೇಗೆ ತೋರಿಸುತ್ತಿತ್ತು ಎಂದು ನೋಡಿ..

ಈ ವೀಡಿಯೊ ತೆಗೆದಾಗ ಬುನ್ನಿಗೆ ಹನ್ನೊಂದು ತಿಂಗಳು. ಮೂಗನ್ನ ಒಂಬತ್ತನೇ ತಿಂಗಳಿನಿಂದ ತೋರಿಸುತಿತ್ತು.. ಆದರೆ ವೀಡಿಯೊ ತೆಗೆಯಲು ಹೋದರೆ ಮಾತ್ರ ಹೇಳಿದ ಹಾಗೆ ಮಾಡುತ್ತಿರಲಿಲ್ಲ.. ನಮ್ಮ ವೀಡಿಯೊ ತೆಗೆಯುವ ಪ್ರಯತ್ನ ಸಫಲವಾಗಿದ್ದು ಹನ್ನೊಂದನೇ ತಿಂಗಳಲ್ಲೇ. 




.
ಈಗ ಮೂಗು ತೋರಿಸು ಅಂದ್ರೆ ಅವಳ ಬೆರಳಲ್ಲಿ ತೋರಿಸುತ್ತೆ..
 ಸಮಯ ಹಾರಿ ಹೋಗುತ್ತಿದೆ.. ಎಷ್ಟು ಬೇಗ ದೊಡ್ಡವಳಾಗುತ್ತಿದ್ದಾಳೆ .. ನಂಬಲು ಆಗುತ್ತಿಲ್ಲ..