Wednesday, 28 September 2011

ಖರೀದಿ


 ಗಂಡ ಹೆಂಡರು ಹೊರಟರು ಖರೀದಿಗೆ,

ಬೇಕೆಂದಿದ್ದಳು ಅವಳು ಬಟ್ಟೆಬರೆ.

ಖರೀದಿಯ ನಂತರ ಹೆಂಡತಿಗೆ ಬಟ್ಟೆ,
ಗಂಡನಿಗೆ ಬಿಲ್ಲಿನ ಬರೆ!!

Monday, 5 September 2011

ಒಂದು ಕ್ಷಣದ ನಿರ್ಲಕ್ಷ್ಯ, ನಷ್ಟವಾಗುವುದು ಲಕ್ಷ

ನನ್ನ 'ಲ್ಯಾಪ್ಟಾಪ್' ನ  ಕರುಳ ಬಳ್ಳಿಯ (cord) ಮೈ ಸುಕ್ಕಾಗತೊಡಗಿತು. ಪದೇ ಪದೇ ಮೈ ಬಿಸಿಯಾಗುತ್ತಿತ್ತು , ಆಗ 'ಇಂದು ನೀನೇನು ಕೆಲಸ ಮಾಡಬೇಡ' ಎಂದು ಮಲಗಿಸಿಬಿಡುತಿದ್ದೆ. ಸೂಕ್ಷ್ಮವಾಗಿ ಹೇಳುತ್ತಿತ್ತು.. 'ನಾನು ಸಾಕಷ್ಟು ಸವೆದಿದ್ದೀನಿ,   ಬೇರೆ ಯಾರನ್ನಾದರೂ ನೋಡಿಕೋ ಎಂದು ನಿಟ್ಟುಸಿರು ಬಿಡುತ್ತಲೇ ಇತ್ತು.. ' 

'ಈಗ ನಿನ್ನ ಪುರಾಣ ಕೇಳುವುದಕ್ಕೆಲ್ಲ ಸಮಯವಿಲ್ಲ, ನನಗೆ ಕಚೇರಿಗೆ ತಡವಾದಾಗ್ಲೆ ನಿನ್ನ ಗೋಳು ಶುರು ಮಾಡುತ್ತೀಯ' ಎಂದು ರೇಗಿದೆ. ನೀನು ಮನೆಗೆ ಬಂದ ಮೇಲೆ ನನ್ನ ಮಾತು ಕೇಳೋಲ್ಲ, ಸುಮ್ನೆ ನನ್ನ ಎಳೆದಾಡಿ, ನನಗೆ ಶಾಕ್ ಕೊಡಿಸುತ್ತೀಯ, ನಿನ್ನ ಲ್ಯಾಪ್ ಟಾಪ್ ನ ಚೇತನ ಜೀವಂತ ಇರಿಸಲು, ಆಮೇಲೆ ಕೇಳೋದೇ ಬೇಡ, ನಿನ್ನ ಬ್ಲಾಗ್, ನಿನ್ನ ಫೇಸ್ ಬುಕ್ , ನಿನ್ನ ಜೀಮೇಲ್, ನನ್ನ ಒದ್ದಾಟ ಕಾಣುವುದೇ ಇಲ್ಲ' ಎಂದು cord ಹೇಳಿಯೂ ಮುಗಿಸಿರಲಿಲ್ಲ.. ನಾನು ಕೋಣೆ ಇಂದ ಹೊರಗೆ ನಡೆದೇ.


ಮನೆಗೆ ಬರುವುದು ೬.೩೦ ಆಗಿತ್ತು. ಅಮ್ಮ ಚಕ್ಕುಲಿ ಮತ್ತೆ ಕಾಫಿ ಕೊಟ್ಟರು, ಚಕ್ಕುಲಿ ಕಟ-ಕಟನೇ ಕಡಿಯುತ್ತಾ, ಲ್ಯಾಪ್ ಟಾಪ್ 'on ' ಮಾಡಿದೆ. 'ON ' ಆಗಲೇ ಇಲ್ಲ! ಇದೇನಪ್ಪ ಆಯಿತು ಎಂದು, 'cord ಅನ್ನು power -socket ಬಾಯಿಗೆ ಇಟ್ಟೆ.. ಅದು ಉಸಿರು ತುಂಬಿ ಜೀವ ಕೊಡುತ್ತದೆ ಎಂದು. ಊಹ್ಞೂ.. ಎನೂ ಆಗಲಿಲ್ಲ.. ಗಾಬರಿಯಾಯಿತು.. ನನ್ನ ಫೋನ್ charger ಹಾಕಿ ಫೋನ್ ಸಿಕ್ಕಿಸಿದೆ, charge ಆಗುತಿತ್ತು.. ಅಂದರೆ ನನ್ನ ಪ್ರೀತಿಯ cord ನ ಉಸಿರು ನಿಂತು ಹೋಯಿತೇ? ಆಗ ಒಳಗಿನ ಮನಸ್ಸು ಕುಪಿತಗೊಂಡಿತು.. ' ಸಾಕು ನಾಟಕ ನಿಂದು, 'ಪ್ರೀತಿಯ' ಅಂತೆ! ನಿನ್ನ ಲ್ಯಾಪ್ ಟಾಪ್ ನೋಡೋಕ್ಕೆ ಆಗೋಲ್ಲ ಎಂದು ನಿನಗೆ ಬೇಸರವಾಗಿದಿಯೇ ಹೊರತು cord ಹೋಯಿತು ಎಂದು ಅಲ್ಲ.
Cord ಜೊತೆ ನಿನ್ನ ಲ್ಯಾಪ್ ಟಾಪ್ ಕೂಡ ಸತ್ತ ಹಾಗೆಯೇ. ' ನಾನು ಮೌನದಿಂದ ತಲೆ ಬಾಗಿದೆ.

ನನ್ನ ಎಷ್ಟೋ file ಗಳು, ಎಷ್ಟೋ ವರ್ಷದ documents ಗಳು, ಚಿತ್ರಗಳು ಎಲ್ಲ ಆ ಬೃಹದಾಕಾರದ ಲ್ಯಾಪ್ ಟಾಪ್ ದೇಹದಲ್ಲಿ ಹೂತುಹೋಗಿತ್ತು. ಈಗ ಅದನ್ನು ಹೇಗಾದರು ಮಾಡಿ ಮರಣೋತ್ತರ ಪರೀಕ್ಷೆ ಮಾಡಿಸಿ ಆದರೂ  ಹೊರ ತೆಗಿಸಬೇಕಿತ್ತು. ನಿಧಿ ಯಾರದೋ ದೇಹದಲ್ಲಿ ಬಚ್ಚಿಟ್ಟು ಅವರು ಸತ್ತ ಹಾಗೆ ಆಯಿತು ನನ್ನ ಪರಿಸ್ಥಿತಿ. ಗೊತ್ತಿರುವವರನ್ನ ಕೇಳಿದೆ. 
ನನ್ನ ಹಳೆಯ Cord ಈಗ ಮಾರುಕಟ್ಟೆಯಲ್ಲೇ ಇಲ್ಲವಂತೆ. ಬೇರೆಯಾವುದು ಇದಕ್ಕೆ ಸರಿ ಹೊಂದುವುದಿಲ್ಲವಂತೆ.. 



ಸರಿ.. ಯಾವುದೋ ಚೀನೀ ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂದು, ಒಂದು ಭಾನುವಾರವೆಲ್ಲ ಮಳೆ, ಚಳಿ, ಗಾಳಿಯಲ್ಲಿ ಅಲೆದು, ಒಂದು Cord ತಂದೆ. ಅದರಿಂದ ಜೀವ ಏನೋ ಬಂತು, ಆದರೆ ಅದು ಮೊದಲ ಭಾರಿಯೇ ಜ್ವರದಿಂದ ಬಳಳಲು ಶುರು ಮಾಡಿತ್ತು.. ಈ ಭಾರಿ ಹುಷಾರಗಿದ್ದೆ. ನನ್ನ data ಎಲ್ಲ Hard-disk drive ಗೆ ರವಾನಿಸಬಿಟ್ಟೆ. ಮುಂದಿನ ದಿನ  ಅದೂ  ಅಸುನೀಗಿತ್ತು.

ಒಂದು ಪಾಠವಂತೂ ಕಲೆತೆ. 'ಒಂದು ಕ್ಷಣದ ನಿರ್ಲಕ್ಷ್ಯ, ನಷ್ಟವಾಗುವುದು ಲಕ್ಷ' 
  

Tuesday, 30 August 2011

ಪಂಡಿತರ ಉವಾಚ - ೧


ಖನ್ನಡ ಮಾತೆ ಹೃದಯ ಅಂತು ಒಡೆದು ವೋಯಿತು



Wednesday, 17 August 2011

ನಿನ್ನ ಮೂಗು ಎಲ್ಲಿ?

ಮೂಗು ತೋರಿಸು ಅಂದ್ರೆ ಹೇಗೆ ತೋರಿಸುತ್ತಿತ್ತು ಎಂದು ನೋಡಿ..

ಈ ವೀಡಿಯೊ ತೆಗೆದಾಗ ಬುನ್ನಿಗೆ ಹನ್ನೊಂದು ತಿಂಗಳು. ಮೂಗನ್ನ ಒಂಬತ್ತನೇ ತಿಂಗಳಿನಿಂದ ತೋರಿಸುತಿತ್ತು.. ಆದರೆ ವೀಡಿಯೊ ತೆಗೆಯಲು ಹೋದರೆ ಮಾತ್ರ ಹೇಳಿದ ಹಾಗೆ ಮಾಡುತ್ತಿರಲಿಲ್ಲ.. ನಮ್ಮ ವೀಡಿಯೊ ತೆಗೆಯುವ ಪ್ರಯತ್ನ ಸಫಲವಾಗಿದ್ದು ಹನ್ನೊಂದನೇ ತಿಂಗಳಲ್ಲೇ. 




.
ಈಗ ಮೂಗು ತೋರಿಸು ಅಂದ್ರೆ ಅವಳ ಬೆರಳಲ್ಲಿ ತೋರಿಸುತ್ತೆ..
 ಸಮಯ ಹಾರಿ ಹೋಗುತ್ತಿದೆ.. ಎಷ್ಟು ಬೇಗ ದೊಡ್ಡವಳಾಗುತ್ತಿದ್ದಾಳೆ .. ನಂಬಲು ಆಗುತ್ತಿಲ್ಲ..  

ತೊದಲು ಮಾತು

ಮಕ್ಕಳ ಮೊದಲ ಮಾತು ತೊದಲು.. ಅದನ್ನ  ಕೇಳಲು  ಬಹಳನೇ ಅಂದ..  
ಬುನ್ನಿ ಮೊದಲ ಭಾರಿ ಅಪ್ಪ ಅಮ್ಮ ಅಂತ ಶಬ್ದ ಪ್ರಯೋಗ ಮಾಡಿದ್ದು ೧೦ ನೇ ತಿಂಗಳಲ್ಲಿ.. 
ಆದರೆ ಅವಾಗ ಆ ಪದಗಳ ಅರ್ಥ ಅವಳಿಗೆ ತಿಳಿದಿರಲಿಲ್ಲ.. 
೧೧ ನೇ ತಿಂಗಳಲ್ಲಿ ಅರ್ಥ ತಿಳಿದು ಶಬ್ಧಗಳ ಪ್ರಯೋಗ ಮಾಡಲು ಶುರು ಮಾಡಿದಳು.. ಆವಾಗಿನಿಂದ ಪ್ರತಿ ನಿತ್ಯ ಏನೋ ಹೊಸದು ಕಲಿಯೋತ್ತೆ ಗುಂಡಮ್ಮ..  
ಸದ್ಯಕ್ಕೆ ನಿತ್ಯ ಬಳಸುವ ಪದಗಳ (ಬಾಣ) ಪ್ರಯೋಗದ ಪಟ್ಟಿ ಮಾಡುತ್ತೇನೆ.. 
 ಎಡ ಭಾಗಕ್ಕೆ ಬಾರೋ ಪದಗಳು ಅವಳ ಪ್ರಯೋಗ - ಬಲಕ್ಕೆ ನಮ್ಮ ಭಾಷೆಯಲ್ಲಿ ಅದರ ಅರ್ಥ

 ನಿತ್ಯ ಬಳಕೆ ವಸ್ತುಗಳ ವಾಸ್ತು


ಬೋತುತುತು - REMOTE 
ಬಾತೆತೆ - ಬಾಚಣಿಗೆ
ಮೋಮ್ - ಫೋನ್
ಬುಗಿ - ಬುಗುರಿ
ಕೂ - ಶೂ
ತೋತ - ಲೋಟ
ಪೂನ್ - Spoon
 ತುತ್ತು - ಜುಟ್ಟು (ಜುಟ್ಟನು ಹಾಕುವ Band )
ಬದೆ - ಬಲೆ
ಓಯೇ - ಓಲೆ
ಬತೆತ್ - Bucket 
ಕಾಕು - ಕಾಸು/ಕಾಳು
 ಮನೆ - ಮಳೆ

 ಮೈಗೂ ಸೈ

ಒತ್ತೆ - ಹೊಟ್ಟೆ
ಮೂಗು - ಮೂಗು
ಕಣ್ಣು - ಕಣ್ಣು
ಕಿವಿ - ಕಿವಿ
ತಯೇ - ತಲೆ 
ಕಾಆ - ಕಾಲು
ಕೈ - ಕೈ

ಆಹಾರದ ವ್ಯವಹಾರ 

ದೋತೆ - ದೋಸೆ
ಬಿತ್ತಿ - ಬಿಚ್ಚಿ (Biscuit)
ಕಾಕೇಕ್ - ಚಾಕಲೇಟ್
 ಗೀಯ - ಜೀಯ (ನೀರು ಮಕ್ಕಳಿಗೆ ಬಳಸುವ ಪದ)
ಯಾಯಾ - ಲಾಲ (ಹಾಲು ಮಕ್ಕಳಿಗೆ ಬಳಸುವ ಪದ )
ತತಾಪಿ - ಚಪಾತಿ

 ಪರಿ 'ಸ್ತಿತಿ'

ಆತೆ - ಆಚೆ
ಮೇಏ- ಮೇಲೆ
ಕೇಗೆ - ಕೆಳಗೆ

 ಕ್ರಿಯೆ ಪದದ ಮಾಯೆ

ಕೂತಿ - ಕೂಚಿ (ಕೂರು ಎನ್ನಲು ಮಕ್ಕಳು ಬಳಸುವ ಪದ )
ನಿಂಕೊ - ನಿಂಚೋ (ನಿಲ್ಲು ಎನ್ನಲು ಮಕ್ಕಳು ಬಳಸುವ ಪದ)
ಮೊಂಮೊಂ -  ಮೊಂಮೊಂ (ಊಟ)
 ಕೊವು - ಕೊಡು
ಎತ್ತೋ - ಎತ್ತಿಗೋ
 ಗೋಗೋ ತಾಕಿ - ಜೋ ಜೋ ಲಾಲಿ (ಹಾಡು ಎಂದು ಹೇಳಲು)
ತಾಕಿ - ತಾಚಿ (ಮಲಗು ಎನ್ನಲು ಮಕ್ಕಳಿಗೆ ಉಪಯೋಗಿಸುವ ಪದ)
ತಿನ್ನು - ತಿನ್ನು (ತಿನ್ನಲು ಬೇಕು ಎಂದು ಕೇಳುವ ಪರಿ )
ಗೀ ಗೀ - ಜುಯ್ಯ್ ಜುಯ್ಯ್ (ಜೋಕಾಲಿ ಆಡಿಸು ಎಂದು ಕೇಳಲು ಇದನ್ನು ಹೇಳುತ್ತಾಳೆ)
ಹಾಕು - ಹಾಕು


ಹಣ್ಣು-ತರಕಾರಿ ಬೇಕಾ ರೀ?  

ತುತೀನ - ಪುದೀನಾ
ಆಊ - ಆಲೂ  
ಪೋತತೋ - Potato 
ಕಾತೇತ್ - Carrot 
ಮಾವು - ಮಾವು
ಮೆಮಿಂಕಾಯ್ - ಮೆಣಸಿನಕಾಯಿ

 ಹಾಗೆ ಕೆಲವು

ಹಣ್ಣುಕಾಯ್ - ಯಾವುದೇ ಅವಳಿಗೆ ಗೊತ್ತಿರದ ಹಣ್ಣು ತರಕಾರಿ
ನೀನು - ನಾನು (ನಾವು ಅವಳನ್ನು ನೀನು ಎಂದು ಮಾತದಿಸುವುದರಿಂದ ಅವಳು ನೀನು ಎಂದರೆ ನಾನು ಅಂದ್ಕೊಂಡಿದ್ದಾಳೆ)

ಇದು ಬಿಟ್ಟು ಪ್ರಾಣಿ ಪಕ್ಷಿಗಳನ್ನ ಗುರುತಿಸುತ್ತದೆ.. ಅದರ ಕೂಗಿನ ಶಬ್ಧವನ್ನು ಮಾಡುತ್ತದೆ.. ಅದನ್ನು ವೀಡಿಯೊ ಸಮೇತ ಹಾಕುತ್ತೇನೆ..  

Friday, 29 July 2011

ಸಾಗುತ ದೂರ ದೂರ

 ಅವಳು ದೂರದ ಊರಿಗೆ ಕೆಲಸಕ್ಕಾಗಿ ಹೊರಟು ನಿಂತಿದ್ದಳು. ಅವಳ ತಂದೆ ಅವಳನ್ನು ಬಿಟ್ಟು ಬರಲು ಜೊತೆ ಇದ್ದರು. ರೈಲು ನಿಲ್ದಾಣದಲ್ಲಿ, ಅವನಿಗೆ ಕರೆ ಮಾಡಿದಳು. ಅವನಿಲ್ಲಿ ಅವಳು ಹೊರಡುತ್ತಾಳೆ ಎನ್ನುವ ಯಾವ ಅಂಜಿಕೆ, ಯೋಚನೆ, ಪೇಚಾಟ ಏನೂ ಕಾಣಲಿಲ್ಲ. 'ಹೊರಡುತ್ತಿದ್ದೀನಿ ನಾನು. ಕೊನೆಯದಾಗಿ ಇಷ್ಟು ಹೊತ್ತು ಮಾತನಾಡಲು ಆಗೋದು. ಇನ್ನು ಮುಂದೆ ಅಷ್ಟೊಂದೆಲ್ಲ ಖರ್ಚು ಮಾಡಿಕೊಂಡು ಕರೆ ಮಾಡೋಕ್ಕಾಗೋಲ್ಲ." ಎಂದಳು. ಅವಳ ಕಣ್ಣು ತುಂಬಿ ಬಂದಿತ್ತು. ಹೃದಯ ೧೦ ಕಿಲೋ ಅಕ್ಕಿ ಇರೋ ಮೂಟೆ ಆಗಿತ್ತು. 
'ಗೊತ್ತಿರೋ ವಿಷ್ಯ ಅಲ್ವಾ? ಜೀವನ ಬಂದ ಹಾದಿಯಲ್ಲಿ ನಡೆದುಕೊಂಡು ಹೋಗಬೇಕು' ಎಂದು ನಿರ್ಭಾವವಾಗಿ ಹೇಳಿದನು. 

ಅವಳಿಗೆ ಅವಳ ಮನಸಿನ ಹಂಬಲ ಗೋಚರಿಸೋ ತೊಡಗಿತ್ತು.. . ಅವನಿಂದ ದೂರ ಹೋಗುತಿದ್ದೀನಿ ಎಂದು ಯೋಚಿಸಿದಾಗೆಲ್ಲ ಹೃದಯ 'ನಾ ನಿನ್ನ ಜೊತೆ ಬರಲಾರೆ' ಎಂದು ಕೀರಲು ಧ್ವನಿಯಲ್ಲಿ ಅಳುತ್ತಿತ್ತು. ಅವಳ ಹೃದಯಕ್ಕೆ ಅವನ ಒಡನಾಟ ಬೇಕಿತ್ತು. ಆದರೆ ಅವನಿಗೆ ಏನೂ ಅನ್ನಿಸೋದೇ ಇಲ್ವಲ್ಲ. ಅವಳ mobile ತೆಗೆದು ಬರೆದಳು

ಬಾಗಿಲು ತೆರೆದಿದೆ, ಕಂಗಳು ಕಾದಿವೆ
ಬರಬೇಕಾದವರು ಬರುವರೇನೋ?
ಮನದ ಕಾವು ತಣಿವುದೇನೋ?
ಅವನ ನೆನಪಲ್ಲೇ ಸವೆದಿದೆ ಜೀವ
ಆ ಸವಿಯಲ್ಲಿ ಮರೆತಿದೆ ನೋವ..
ಒಲವಿನ ಧಾರೆಯು ಬಸಿದು ಹರಿಯುತಿದೆ
ಗುಪ್ತಗಾಮಿನಿಯಾಗಿ ನೆನೆಸಿ, ಮರೆಯಾಗಿದೆ.
ಇದು ಆ ಹೃದಯಕ್ಕೆ ತಿಳಿಯದೆ ಹೋದರೆ?
ಮುನದಲೇ ಚೀರುತಿದೆ ಹೃದಯಾಂತರಾಳದ ಕರೆ

ಬರೆದು ಮುಗಿಸಿದ್ದಳಷ್ಟೇ.. ಅವನ ಕರೆ ಬಂತು.

'ಯಾವ platform ನಲ್ಲಿ ಇದ್ದೀಯ?'
'ಯಾಕೆ? ಇಲ್ಲಿಗೆ ಬಂದಿರೋ ಹಾಗಿದೆ!! ಹೌದಾ?'
'ಕೇಳಿದಕ್ಕೆ ಉತ್ತರಿಸು'
'೫'
'ಸೀದಾ ಬಾ.. Gate ಹತ್ತಿರ'

ಅವಳ ಕಿವಿಯನ್ನ ಅವಳೇ ನಂಬಲಾಗಲಿಲ್ಲ.. ಅವನು ಬಂದಿದ್ದ!! ಅವಳನ್ನ ಬೀಳ್ಕೊಡಲು. ಅವಳ ಅಪ್ಪನಿಗೆ ಇಲ್ಲೇ ನನ್ನ ಗೆಳೆಯರು ಬಂದಿದ್ದಾರೆ, ಹೋಗಿ ಬರುತ್ತೇನೆಂದು ಹೇಳಿ ಓಡಿದಳು.. ಯಾವುದೊ ದೊಡ್ಡ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಅವಳ ಹೆಸರು ಕರೆದಾಗ ಆಗೋ ಅನುಭವ ಅವಳಿಗೆ.. ಅವಳ ಪಾಲಿಗೆ ಅವನೇ 'ಜೀವನ' 

ಅವನು ಅವಳನ್ನು ಕಂಡೊಡನೆ ನಕ್ಕ.. ಇವಳಿಗೆ ಹಿಗ್ಗೋ ಹಿಗ್ಗು.. 'ಹುಷಾರಾಗಿ ಹೋಗಿ ಬಾ' ಎಂದ.. ಸರಿ ಎಂದು ತಲೆ ಅಲ್ಲಾಡಿಸಿದಳು.. ಮಾತೇ ಹೊರಡಲಿಲ್ಲ.. !  

Wednesday, 20 July 2011

ಪುರಾಣ



ಸೀತೆಯನು ಮೆಚ್ಚಿಸಲು ಬಂದ ರಾವಣ,
ತೋರಿಸಿದ ಅವನ ಎಲ್ಲ ಪರಾಕ್ರಮ..
ಜಾನಕಿಯ ಮನದ ತುಂಬಾ ಅವಳ ರಮಣ
ರಾವಣ ಎಂದಿಗೂ ಪರ, ಅಕ್ರಮ