Wednesday, 29 June 2011

ಆ ಕೊನೆಯ ಇರುಳು

ನಿರ್ಜನ ಜಾಗದಲಿ, ಕರಾಳ ರಾತ್ರಿಯಲಿ
ಹೊಂಗೆಯ ಮರದಡಿ ಕೂತಳು ಕಮಲಿ..
ಸೂಜಿಯಂತೆ ಚುಚ್ಚುತ್ತಿದ್ದ ಬಿರುಸು ಗಾಳಿ,
ಚರ್ಮವ ಸುಲಿಯುವ ಹಾಗೆ ಮಾಡಿದೆ ಧಾಳಿ..

ಸಂಕಟ, ಅವಮಾನ, ವಿಕಾರ ನೆನಪುಗಳ  ಸವಾರಿ
ದುಃಖ, ಸಂಕಟ, ದುಮ್ಮಾನ ಒತ್ತರಿಸಿ ಬಂತು ಹುಹಾರಿ..
ಬತ್ತಿದೆ ಕಂಬನಿ, ಮುರಿದಿದೆ ಕನಸು,
ಮಣಿಯದು, ದಣಿಯದು, ಕಲ್ಲಾಗಿದೆ ಮನಸು..



ಯಾರಿಗಾಗೋ ಈ ಜೀವನ, ಏತಕ್ಕಾಗಿ ಬದುಕಿರುವೆ ನಾ?
ಉತ್ತರಿಸೆಲೇ ಚಂದಾಮಾಮ, ನಿರೀಕ್ಷಿಸಿದೆ ಈ ನಯನ..
ಅವ ಮೋರೆ ನೋಡಲೂ ಬರಲಿಲ್ಲ..
ಗೊತ್ತು.. ನಾ ಯಾರಿಗೂ ಬೇಕಿಲ್ಲ..

ಸಾಕಷ್ಟು ಸವೆದಿದೆ ಪಯಣ..
ತಲುಪಿದೆ ಕೊನೆಯ ನಿಲ್ದಾಣ: ಮಸಣ!


Tuesday, 14 June 2011

ಸೂರ್ಯೋದಯ


 ದೂರದ ದಿಗಂತದಲಿ ನೇಸರನು ಹುಟ್ಟಿ,

ಬೆಳಗ್ಯಾನು ಮನಸನು ಹೃದಯಾಂತರಾಳವನು ಮುಟ್ಟಿ..

ಬಳೆದನು ಹೊಂಬಣ್ಣವನು ಅಂಬರಕೆ ಉದಯಿಸೋ ಮುನ್ನ..

ತಂದಾನು ಹೂನಗೆಯನು; ಅಳಿಸಿ ಅಳುವನ್ನ..


Tuesday, 31 May 2011

Call receive ಮಾಡು ತಾಯಿ!!

"ಕೇಳದೆ ನಿಮಗೀಗ ದೂರದಲ್ಲಿ ಯಾರೋ.." ಎಂಬ caller-tune ಬಂತು.. ಆಮೇಲೆ "ನೀವು ಕರೆ ಮಾಡಿದ ಚಂದಾದಾರರು ನಿಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲ. ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ".. "ಛೆ.. ಇವಳು ಯಾವಾಗಲೂ ಹೀಗೆ, ಎಲ್ಲೊ phone ಇಟ್ಟು ಮತ್ತೆಲ್ಲೋ ಇರ್ತಾಳೆ.. Cellphone ಇರೋದು ಯಾಕೆ? ತೆಗೆದು ಬಿಸಾಕಲಿ.. ಬೇಕೆಂದಾಗ ಸಿಗದೇ ಹೋದರೆ ಉಪಯೋಗವೇನು? "

ಹೀಗೆ ಎಷ್ಟು ಜನ ಗಂಡಸರು/ಹುಡುಗರು ಹೆಂಗಸರನ್ನ /ಹುಡಗಿಯರನ್ನ  ಬೈಕೊಂಡು ಇರೋ ಪ್ರಸಂಗ ಅದೆಷ್ಟು ಇದೆಯೋ?

ಹೆಂಗಸರು ಜೇಬು ಇಲ್ಲದ ಅಂಗಿ ಧರಿಸಿದ್ದರೆ  , ಅವರು ಸಾಮಾನ್ಯವಾಗಿ ತಮ್ಮ mobile ನ ತಮ್ಮ ಕೈಯಲ್ಲಿ ಅಥವಾ Handbag ನಲ್ಲಿ ಇಟ್ಟುಕೊಳ್ಳುತ್ತಾರೆ. 




















ಕಚೇರಿಯಲ್ಲಿ ಇದ್ದರೆ ಪರವಾಗಿಲ್ಲ. Desk ಮೇಲೆ ಇರುತ್ತದೆ. ಎಲ್ಲ ಕರೆಗಳನ್ನು ಸ್ವೀಕರಿಸಬಹುದು. ಯಾವಾಗ ಮೇಲೆ ಹೇಳಿದಂತ  ಪರಿಸ್ಥಿತಿ  ಆಗಬಹುದು ಎಂದು ಯೋಚಿಸಿದರೆ..

೧) ಮನೆಗೆ ಹೋದಮೇಲೆ, ಕೆಲಸ ಇದ್ದಾಗ ಮೊಬೈಲ್ ಎಲ್ಲೊ, ಅವರು ಎಲ್ಲೊ.. ಹೋದ ಕಡೆಯೆಲ್ಲ ಹಿಡಿದುಕೊಂಡು ಓಡಾಡಲು ತಾಳ್ಮೆ ಇರುವುದಿಲ್ಲವೇನೋ? ಕೈಗಳೆರಡು ಕೆಲಸ ಮಾಡುವ ಭರದಲ್ಲಿ ಇರುತ್ತದೆ, ಮನಸ್ಸು ಅಲ್ಲೇ ಲೀನ ಆಗಿರತ್ತೆ. ಆಗ ಯಾವ ಕರೆ ಬಂತೋ, ಯಾವ 'ಬರೆ' ತಂತೋ.. ಗೊತ್ತಿರೋಲ್ಲ..

೨) ಇನ್ನ ಆಚೆ ಹೋದಾಗ, Handbag ಒಂದು ಕೈಯಲ್ಲಿ, mobile ಒಂದರಲ್ಲಿ ಇಟ್ಕೋಳೋದು ಏನು ಎಂದು mobile ಅನ್ನು bag ನಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಆಮೇಲೆ ಅವರದೇ ಲೋಕ. ಕರೆ ಬಂದರೂ, ಆ ಜನ ಜಂಗುಳಿಯ ಮಧ್ಯೆ traffic ಅಬ್ಬರದ ನಡುವೆ ಏನೂ ಕೇಳದು. ಕರೆ ಮಾಡಿದವರು 'ಕರೆ'ದರು ಕೇಳದೆ... ಎಂದು ತಲೆ ಚೆಚ್ಚಿಕೋಬೇಕು ಅಷ್ಟೇ!

೩) ದ್ವಿಚಕ್ರ ವಾಹನದಲ್ಲಿ ಓಡಾಡುವವರು ಕೆಲವರು, ಡಿಕ್ಕಿಯಲ್ಲಿ ಹಾಕಿ Zoom ಅಂತ ಹೋಗುತಿರುತ್ತಾರೆ. ನಮ್ಮ ರಸ್ತೆಗಳಲ್ಲಿ ಮೈಯೆಲ್ಲ ಕಣ್ಣಾಗಿದ್ರು ಸಾಲದು, ಇಲ್ಲದಿದ್ರೆ ಮಣ್ಣು ಆಗೋದೇ. ಈ ಏಕಾಗ್ರತೆಯಲ್ಲಿ 'ಏಕ್ ಕಾಲ್ ಗ್ರಹಿಸುವುದಿಲ್ಲ'

ಕಾರಣ ಏನೆ ಇರಬಹುದು, ಕೊನೆಗೆ ಕರೆ ಮಾಡಿದವರಿಂದ ಅಂತು ಅವರು ಮರೆ. ಸುಮ್ಮನೆ ಪುಂಗಾಣಿ ಹೊಡೆಯೋಕ್ಕೆ ಕರೆ ಮಾಡಿದ್ದರೆ ಯಾವಗದ್ರು ಮಾತಾಡಬಹುದು. ಆದರೆ ಮುಖ್ಯ ವಿಷಯ ತಿಳಿಸಲು ಕರೆ ಮಾಡಿದ್ದರೆ, ಕರೆ ಮಾಡಿದವರಿಗೆ ನಿಜವಾಗಿಯೂ ತಲೆ ಕೆಡುತ್ತದೆ. ಅವರನ್ನು ತಲುಪುವ ಬಗೆ ಅದೊಂದೇ ಆಗಿದ್ದರಂತೂ ಆಗುವ ಆತಂಕ, ಬರುವ ಕೋಪ ಅಷ್ಟಿಷ್ಟಲ್ಲ.

ಇದೇ ತಪ್ಪು ನನ್ನಿಂದಲೂ ಒಮ್ಮೊಮ್ಮೆ ಆಗುತ್ತದೆ. ನಾನು ಸುಧಾರಿಸಿಕೊಳ್ಳೋ  ಪ್ರಯತ್ನದಲ್ಲಿ ಇದ್ದೀನಿ.

ಏನು ಮಾಡಬಹುದಪ್ಪ ನಮ್ಮ ಹುಡುಗಿಯರು/ಹೆಂಗಸರು  ಎಂದರೆ,


೧) ಆಚೆ ಹೋದರೆ,ನಿಮ್ಮ ಕೈಯಲ್ಲೇ ಇಟ್ಟುಕೊಳ್ಳಿ ಮೊಬೈಲ್ ನ . ಅದನ್ನು  "Vibration with Ringtone " Mode ಇರಲಿ.
೨) ಮನೆಗೆ ಬಂದ ಕೂಡಲೇ "LOUD " Mode ಗೆ ಹಾಕಿ, ಅಡುಗೆ ಮನೆಯಲ್ಲಿ ಇದ್ದರೆ ಅಲ್ಲಿ, ರೂಂ ನಲ್ಲಿ ಇದ್ದರೆ ಅಲ್ಲಿ mobile ಇಟ್ಟುಕೊಳ್ಳುವ ಹವ್ಯಾಸ ಇರಲಿ.
೩) ಸದಾ "Balance " ಇರಲಿ ನಿಮ್ಮ ಮೊಬೈಲ್ ನಲ್ಲಿ.
೪) ಯಾರೋ ಕರೆ ಮಾಡಿ ಅದನ್ನ ನಿಮಗೆ ಸ್ವೀಕರಿಸಲು ಆಗದೆ ಇದ್ದರೆ, ಮತ್ತೆ ಕರೆ ಮಾಡಲು ಮರೆಯಬೇಡಿ.

ನಮ್ಮ ಹುಡುಗರು/ಗಂಡಸರು ಏನಮ್ಮ ಮಾಡಬಹುದು ಅಂದರೆ

೧) ಒಂದು SMS ಕಳುಹಿಸಿರಿ. ಅವರು ಫೋನ್ ನೋಡಿದ ತಕ್ಷಣ ವಿಷಯ ಏನು ಎಂದು ತಿಳಿಯುತ್ತದೆ.

ಮತ್ತೇನು ಮಾಡಬಹುದೋ ನೀವು.. ಪಾಪದ ಪ್ರಾಣಿಗಳು.. ನನಗಂತೂ ತೋರುತ್ತಿಲ್ಲ..

Friday, 20 May 2011

ನೀ ಬಂದು ನಿಂತಾಗ

ತಂಪಾದ ಗಾಳಿ ಬೀಸುತ್ತಿದೆ, ಅವನು ಆ ದೇವಸ್ಥಾನದ ಆವರಣವೆಲ್ಲ ಸುತ್ತಾಡುತ್ತಿರುವಾಗ, ಪಕ್ಕ ತಿರುಗಿದವನು ಏನೋ ಕಂಡ ಹಾಗೆ ಆಗಿ ನೋಡಿದ್ದು ಅದೇನಾ? ಎಂದು ತಿರುಗಿ ಮತ್ತೆ ನೋಡುತ್ತಾನೆ.. ಹೌದು.. ಅದೇ.. ಅವಳೇ!!
 ಅವಳು ಮಲಗಿದ್ದಾಳೆ..  
ಅವನು ಹತ್ತಿರ ಬರುತ್ತಾನೆ..ಅವಳ ಮಗುವಿನಂತ ಮುಗ್ದ ಮುಖ ಸ್ಪಷ್ಟವಾಗಿ ಕಾಣತೊಡಗುತ್ತದೆ.. ಅವಳು ಮಲಗಿರುವುದನ್ನೇ ನೋಡುತ್ತಾ ಕೂರುತ್ತಾನೆ.. "ಇಷ್ಟು ಸುಂದರ ಹುಡುಗಿ, ನನ್ನಂತ "ಸುಮಾರು" ಹುಡುಗನನ್ನ ಮೆಚ್ಚಲು ಸಾಧ್ಯವಾ?" "ಛೆ.. ಇಂಥ ಯೋಚನೆ ಬದಿಗಿಡು.. ನಿನ್ನ ಗುರಿ ಏನಿದೆಯೋ ಅದು ನೋಡಿಕೋ" ಎಂದು ಯೋಚಿಸುವುದರೊಳಗೆ ಅವನಿಗೆ ಉತ್ತರ ಬಂದಿತ್ತು ಒಳಗಿನಿಂದ.. "ನೋಡುತ್ತಲೇ ಇದ್ದೀನಲ್ಲ" ಎಂದು..


"ಇಷ್ಟು ಜನ ನೋಡೋ ಜಾಗದಲ್ಲಿ ಇವಳು ಏಕೆ ಮಲಗಿದ್ದಾಳೆ?
 ಯಾರಾದರು ಅಸಭ್ಯವಾಗಿ ವರ್ತಿಸಿದರೆ? 
ಇವಳಿಗೆ ಹೇಗೆ ಹೇಳಲಿ?"  
ಎಂದು ಯೋಚಿಸುವಷ್ಟರಲ್ಲಿ ಒಂದು ನೊಣ ಅವಳ ಕೆಂಪಾದ ಮೃದು ಕೆನ್ನೆಯ ಮೇಲೆ ಜಾರೋ ಬಂಡೆ ಆಡಲು ಶುರು ಮಾಡಿತು..

ಇವನಿಗೋ ಸಹಿಸಲಾರದಷ್ಟು ಕೋಪ ಬಂದಿತ್ತು.. ಕೈಯಲ್ಲಿ ಇದ್ದ ದಿನ ಪತ್ರಿಕೆಯಲ್ಲಿ ಜೋರಾಗಿ ಗಾಳಿ ಬೀಸಿ, ಓಡಿಸಲು ಪ್ರಯತ್ನಿಸಿದ.. ಅದು ಇವನನ್ನು ನೋಡಿ ಗಹಗಹಿಸಿ ನಕ್ಕ ಹಾಗೆ ಆಯಿತು ಅವನಿಗೆ.. ಅದಕ್ಕೆ ಸರಿಯಾಗಿ ಪಾಠ ಕಲಿಸುತ್ತೀನಿ..
ಅವಳು ನನ್ನವಳು ಎಂದು ತೋರಿಸುತ್ತೀನಿ ನಿನಗೆ ಎಂದುಕೊಂಡನು.. ಅವನು ಅವಳ ಕೆನ್ನೆಯ ಹತ್ತಿರ ಬಂದ, ಅವಳ ಉಸಿರು ಅವನ ಉಸಿರು ಸೇರುತ್ತಿತ್ತು, ಅದೇ ಪ್ರೇಮದ ಬಿಸಿಯಲ್ಲಿ ಅವಳ ಕೆನ್ನೆಯ ಮೇಲೆ ಬಿಸಿ ಮುತ್ತನಿತ್ತ.. ಅವಳ ಕೆನ್ನೆಯೆಲ್ಲ ಪ್ರೇಮ ರಸದ ಸ್ವಾದ ಅನುಭವಿಸಿದ ನೀರಿನಂತೆ ಆಗಿತ್ತು..  ನಾಚಿ ಕೆಂಪಾಗಿ, ತುಟಿಯ ಕೊನೆಯಿಂದ ನಕ್ಕು, ಒದ್ದೆಯಾಗಿದ್ದ ಕೆನ್ನೆ ಒರೆಸುತ್ತಾ ಕಣ್ಣು ಬಿಟ್ಟಳು.."ವ್ಯಾಕ್! ಕೆಟ್ಟ ವಾಸನೆ ಬರುತ್ತಿದೆ! ಅವಳ ಕೈ, ಮತ್ತು ಕೆನ್ನೆ ಕಾಗೆ ಪೀಯ ಅಂಟಿತ್ತು.. ಅವನು ಹತ್ತಿರವೂ ಇರಲಿಲ್ಲ.. ಹಾಗಿದ್ದರೆ, ಕಂಡದ್ದೆಲ್ಲ ಕನಸಾ?  ಎಂದು ಅವಳು ಅವಕ್ಕಾದಳು..


ಏನಾಯಿತೆಂದು ನೆನಪಿಸಿಕೊಂಡಳು.. ೨ ತಾಸು ಹಿಂದಿಂದ ನೆನಪಿನ ಸರಮಾಲೆ ಹೀಗಿತ್ತು "ಹಸಿದ ಹೊಟ್ಟೆಗೆ ಬಿಸಿ ಬಿಸಿ ಅನ್ನ ಸಾರು ಬಿದ್ದಿತ್ತು.. ಬಿಸಿಲಿನ ತಾಪಕ್ಕೆ ತನು ಬೆಂದಿತ್ತು.. ಓಡಾಟದಿಂದ ಮೈ ದಣಿದಿತ್ತು.. ಮಲಗಲು ಎಲ್ಲಾದರು ಜಾಗ ಸಿಕ್ಕರೆ ಸಾಕು ಎಂದು ಕಾದಿದ್ದಳು ಅವಳು.. ಅವಳಿದ್ದ ಆವರಣದಲ್ಲೇ ಒಂದು ಮಂಟಪ.. ಆ ಮಂಟಪಕ್ಕೆ ಹೋಗಿ, "ಧಡಕ್ಕನೆ ಮಲಗಿದ್ದಳು .. "

 
ಮುಖ ಮತ್ತೆ ಕೈತೊಳೆದು ಕೊಳ್ಳಲು ಹೋದಾಗ,ಅವನು ಯಾವುದೋ ಮರದಡಿ "ಶಿವಾ" ಅಂತ ಮಲಗಿದ್ದನ್ನು ನೋಡಿದಳು..  

Wednesday, 20 April 2011

ವಿಧಿಯ ಆಟ - ಅವಳ ಅವನ ಮಿಲನ

ಗೆಳೆಯರೊಂದಿಗೆ ಚಲನಚಿತ್ರ ನೋಡುವುದೇ ಕಡಿಮೆ. ಅಂದು ಅವಳು ಯಾವುದೊ ಹೊಸ ಚಿತ್ರಕ್ಕೆ ಬರುತ್ತೀನಿ ಎಂದು ಸಮ್ಮತಿ ಸೂಚಿಸಿದ್ದಳು. ಅವಳಿಗೆ ಬಿಳಿ ಚುಡಿದಾರ ಧರಿಸುವ ಮನಸಾಯಿತು.. ಅದರ ತಂಗಿಯರೆಲ್ಲ (ಬಿಳಿ ಓಲೆ, ಬಿಳಿ ಬಳೆ, ಬಿಳಿ ಸರ, ಬಿಳಿ ಹಣೆಬೊಟ್ಟು) ಇದ್ದಾರ ನೋಡಿದಳು.. ಹಣೆಯದು ಇರಲಿಲ್ಲ, ಮರುಕ್ಷಣವೇ ಅಂಗಡಿಗೆ ಧಾಳಿ ಮಾಡಿ ತಂದಳು.. ಅಲಂಕಾರ ಶುರುವಾಯಿತು.. "Sajna Hai Mujhe Sajna ke li a" ಹಾಡಿಕೊಂಡು.. ಅಲಂಕಾರ ಮುಗಿಸಿ, ಕನ್ನಡಿ ನೋಡುತ್ತಾ.. "ಆಹಾ, ಸುಂದರಿ.. ನಿನ್ನ ನೋಡಿದರೆ ರಾಜಕುಮಾರ ಎತ್ತಿ ಹಾಕಿಕೊಂಡು ಹೋಗುತ್ತಾನೆ.. " ಎಂದು ಪಟ್ ಅಂತ ಕನ್ನಡಿಯ ಸುಂದರಿಗೆ ಮುತ್ತನ್ನಿತ್ತು, ಬಿಳಿ ಕೈ-ಚೀಲದಲ್ಲಿ cell ಮತ್ತೆ ೧೫೦ ರುಪಾಯನ್ನು ಹಾಕಿಕೊಂಡು ಕೆಳಗೆ ಹೋದಳು..

ಮನೆಯಲ್ಲಿದ್ದವರಿಗೆ ತಿಳಿಸಿ, ಅವಳ ರಥ ಏರಿದೊಡನೆ ಅವಳಿಗೆನೋ ಮಿಂಚಿನ ಪುಳಕವ. "ಅದು ಚಲನಚಿತ್ರಕ್ಕೆ ಹೋಗುವ ಸಂಭ್ರಮವೋ ಅಥವಾ ಹೊಸ ಪರಿಚಯದ ಕುತೂಹಲವೋ?" . ಅವಳ ಬಾಲ್ಯದಿಂದ ಅವಳು ೧೦ ಚಿತ್ರ ಚಿತ್ರ ಮಂದಿರದಲ್ಲಿ ನೋಡಿದ್ದರೆ ಹೆಚ್ಚು.. ಹೆಚ್ಚು ಜನರನ್ನ ಹತ್ತಿರವೂ ಸೇರಿಸಿರಲಿಲ್ಲ.. ಆದ್ದರಿಂದ ಯಾವುದು ಅನ್ನುವುದು ತಿಳಿಯಲಿಲ್ಲ..

ದಾರಿಯುದ್ದಕ್ಕೂ ಹಾಡನ್ನು ಹಾಡುತ್ತ ಸಾಗಿದಳು.. ಇನ್ನೇನು ಚಿತ್ರ ಮಂದಿರ ಸೇರಬೇಕು ಅಷ್ಟರಲ್ಲಿ ಮಳೆ ಬಂತು.. "ಅಯ್ಯೋ.. ದೇವರೇ.. ನಾನು ಬಿಳಿ ಬಟ್ಟೆ ಹಾಕಿಕೊಂಡಾಗೆ ಮಳೆ ಬರಬೇಕಾ?"  ಎಂದು ಗೊಣಗಾಡಿದಳು.. "ಎಷ್ಟು ಬೇಗ ಆಗತ್ತೋ ಅಷ್ಟು ಬೇಗ ಸೇರೋಣ" ಎಂದು ಯೋಚಿಸಿ ಚಿತ್ರಮಂದಿರ ಸೇರಿದಳು.. 

Gate ಒಳಗೆ ಹೋಗುತ್ತಿದ್ದಂತೆ ಕೆಲವು ಪರಿಚಯದ ಮುಖಗಳು ಕಂಡವು, "ಬಂದೆ.. Park ಮಾಡಿ ಬರುತ್ತೀನಿ" ಎಂದಳು.. ಅವಳ ಮನಸ್ಸು ಆ ಅಪರಿಚಿತನ ಪರಿಚಯಕ್ಕೆ ಕಾಯುತ್ತಿತ್ತು.. ಅವನ ಬಗ್ಗೆ ಬಹಳ ಕೇಳಿದ್ದಳು.. ಅವನ ರೂಪು ರೇಷೆಯ ಬಗ್ಗೆ ಚಿತ್ರ ಮನದಲ್ಲಿತ್ತು.. ಅವನು ಇತರರಿಗಿಂತ ಭಿನ್ನ, ಯೋಚನಾ ಲಹರಿಯೇ ಬೇರೆ ಎನಿಸಿತ್ತು ಅವಳಿಗೆ..ಅವಳು ಕೇಳಿದ ಮಾತುಗಳಿಂದ..

ಮೆಲ್ಲನೆ ನಡೆದು ಹೋದಳು, ಗೊತ್ತಿರೋ ಮುಖಗಳ ನಡುವೆ ಅವಳೇ ಕಂಡುಹಿಡಿಯಲು ಸಾಧ್ಯವಾ ನೋಡಿದಳು.. ಊಹೂಂ.. ಗೊತ್ತಾಗಲಿಲ್ಲ..  "ಬಿಡು.. ಯಾರೋ ಏನೋ.. ತುಂಬಾ ಉತ್ಸಾಹ ಒಳ್ಳೆಯದಲ್ಲ.." ಎಂದುಕೊಂಡಳು..

ಗೊತ್ತಿರುವರು ಹೊಸ ಮುಖಗಳ ಪರಿಚಯ ಮಾಡಿಸ ತೊಡಗಿದರು.. "ಅವನು" ಎಂದಾಗ ಕಿವಿ ನೆಟ್ಟಗಾಯಿತು.. ಆ ಚಿತ್ರ ಈ ಪಾತ್ರ ಸ್ವಲ್ಪ ಹೊಂದುತ್ತಿತ್ತು.. ಇವಳು ಎಲ್ಲರನ್ನು ಮಾತಾಡಿಸಿದ ಹಾಗೆ ಕಿವಿ ಇಂದ ಕಿವಿ ವರೆಗೆ ನಕ್ಕು "Hi " ಎಂದು ಕೈ ಅಲ್ಲಾಡಿಸಿದಳು.. ಅವನಿಂದ ಗಂಭೀರ ಮುಖಭಾವ, ಒಂದು ಕುತ್ತಿಗೆ ಅಲ್ಲಾಡಿಸುವುದರಲ್ಲಿ ಉತ್ತರ ಬಂದಿತ್ತು.. ಅವಳ ಉತ್ಸಾಹದ ಬೆಂಕಿಗೆ ನೀರು ಬಿದ್ದಿತ್ತು, ಕಿವಿಯ ಹತ್ತಿರ ಇದ್ದ ತುಟಿಗಳು ಮೆಲ್ಲನೆ ಅದರ ಜಾಗಕ್ಕೆ ಮರಳಿದವು.. "ಎಷ್ಟು ಕೊಬ್ಬು ಮಗನಿಗೆ, ಒಂದು ಬಾಯಿ ಬಿಟ್ಟು Hi  ಹೇಳೋಕ್ಕೆ ಆಗೋಲ್ವ? ಮಾತಾಡಿಸಿದರೆ ಕೇಳು ನಿನ್ನ.. ಮಗನೆ.. ನೀನೇನೋ ಬಹಳ ಚಂದದ ಮನುಷ್ಯ.. ಅಂತ ತಿಳಿದಿದ್ದೆ.. ನಿನ್ನನ್ನ ಅಷ್ಟು ಏರಿಸಲೇ ಬಾರದಿತ್ತು.. ನನ್ನದೇ ತಪ್ಪು.. ಥೂ.. ನನಗೆ ಸರಿಯಾಗಿ ಬುದ್ಧಿ ಕಲಿಸಿದೆ" ಎಂದು ಮನಸಿನಲ್ಲಿ ಬೈಕೊಂಡು ಚಿತ್ರಮಂದಿರದ ಒಳಗೆ ನಡೆದಳು..

ಅವಳು ಹೋಗಿ ಅವಳ ಗೆಳತಿಯರ ಪಕ್ಕ ಕೂತಾಗ ಅವಳ ಪಕ್ಕದ ಕುರ್ಚಿ ಖಾಲಿ ಇದ್ದದ್ದು ನೋಡಿದಳು.. "ಅವನೇನಾದರು ಬಂದರೆ  ಸರಿ ಇರೋಲ್ಲ " ಎಂದು ಮನಸಿನಲ್ಲಿ ಯೋಚಿಸಿದಳು, ಗೆಳತಿಯರೊಂದಿಗೆ ಮಾತಾಡಲು ಶುರು ಮಾಡಿದಳು.. "Do you mind if I sit here? " ಎಂಬ ಗಂಡು ಧ್ವನಿ ಬಂದಾಗ, ಅವಳ ಯೋಚನೆ ನಿಜವಾಗಿತ್ತು.. ಅವನು ಕೇಳುತಿದ್ದನು.. ಇವಳು ಮತ್ತೆ ಕಿವಿ ಇಂದ ಕಿವಿಗೆ ನಕ್ಕು "No.. Not at all" ಎಂದಳು.. "ಎಲ್ಲಿ ಹೋಯಿತೇ ನಿನ್ನ ರೋಷ ಆವೇಶ ಎಲ್ಲ? ಹೇಡಿ ನೀನು.. ಅವನಿಗೆ ಕಣ್ಣಿಗೆ ಕಣ್ಣು ಎಂದರೆ ಏನು ಅಂತ ತೋರಿಸಬಹುದಿತ್ತು.. " ಅವಳಿಗೆ ಅವನ ಧ್ವನಿ ಬಹಳ ಇಷ್ಟ ಆಗಿಬಿಟ್ಟಿತ್ತು.. ಏನು ಮಾಡುವುದು.. ಬೇಡ ಅನ್ನೋ ಮನಸಾಗಲಿಲ್ಲ..

 ಆ ಮನುಷ್ಯನಿಗೆ ನಗುವುದಕ್ಕೂ ಬರುತ್ತದೆ ಅಂತ ಚಿತ್ರ ನೋಡುವಾಗ, ಯಾವುದೊ ತುಣುಕಿಲ್ಲಿ ಅವಳಿಗೆ ತಿಳಿಯಿತು..
ಚಿತ್ರದ ನಡುವೆ ಮಾತು ಆಡಲಿಲ್ಲ.. ಚಿತ್ರ ಮುಗಿಯಿತು, ಅಂದಿನ ಭೇಟಿ ಕೊನೆಯ ಕ್ಷಣಗಳನ್ನು ಏಣಿಸುತ್ತಿದ್ದಂತೆ,ಅವಳೇ ಮತ್ತೆ ಜೋರಾಗಿ ಕೈ ಅಲ್ಲಾಡಿಸುತ್ತಾ  "Bye " ಮಾಡಿ ಕಳುಹಿಸಿಕೊಟ್ಟಳು..

ಬುದ್ಧಿ ಯಾವಾಗ ಬರತ್ತೆ ನಿಂಗೆ? ಎಂದು ತಲೆ ಚೆಚ್ಚಿಕೊಂಡಿತು ಅವಳ ಬುದ್ಧಿ..

Tuesday, 19 April 2011

ನಿನಗಾಗಿಯೇ ಹಾಡಿದೆ

ಹೊರಗಿನ ಕಿರುಚಾಟ ಎಬ್ಬಿಸಿತು.. ಕನಸಿನ ಲೋಕದಿಂದ ಇಹ ಲೋಕಕ್ಕೆ ಕಾಲಿಟ್ಟಳು.. ಎದ್ದು ನೋಡಿದರೆ ಉಳಿದವರೆಲ್ಲ ಮಲಗಿದ್ದರು.. ಕೈಯಲ್ಲಿ cell ಹಿಡಿದು ಹೊರಗೆ ಹೋದಾಗ ಮನಸು "ಅವನು ಎದ್ದಿರಬಹುದಾ? " ಅಂತ ಕೇಳುತಿತ್ತು.. ಯಾಕೋ ತಡೆಯಲಾಗಲಿಲ್ಲ, ಅವನು ಗೆಳೆಯರೊಂದಿಗೆ ಇದ್ದ ಕೋಣೆಯ ಬಳಿ ಬಂದು ನೋಡಿದರೆ ಬಾಗಿಲು ಮುಚ್ಚಿತ್ತು.. ಅವಳ ಪಾಲಿಗೆ ಅವನ ಮನಸಿನ ಹಾಗೆ.. ಆ ಕೋಣೆಯಲ್ಲಾದರೂ  ಯಾರು ಇದ್ದಾರೆ  ಎಂದು ತಿಳಿದಿತ್ತು.. ಆದರೆ ಅವನ ಮನಸಿನಲ್ಲಿ?

ನಿರಾಶಳಾಗಿ ಪುನಃ ತನ್ನ ಕೋಣೆಯತ್ತ ಹೆಜ್ಜೆ ಹಾಕುತ್ತ  ಅವಳ ಮನಸ್ಸು ಮತ್ತು ಬುದ್ಧಿ ಮಾತಾಡುತಿತ್ತು..
ಮ:  ಅವನು ಎದ್ದಿದ್ದರೆ, ಸ್ವಲ್ಪ ಮಾತಾಡಬಹುದಿತ್ತು
ಬು: ಏನೆಂದು ಮಾತಾಡುತಿದ್ದೆ? ಸುಮ್ಮನೆ ಸಾಮಾನ್ಯ ವಿಷಯದ ಬಗ್ಗೆ ಚರ್ಚೆ. ಅದು ಯಾವಾಗಲಾದರೂ ಮಾಡಬಹುದು
ಮ: ನನ್ನ ಎದೆ ತುಡಿಯುತ್ತಿದೆ, ಅವನ ಮಾತಿಗೆ.. ಅವನು ನನಗೇನಾಗಬೇಕು..
ಬು: ನಿನಗೆ ಅವನು...

ಅಷ್ಟರಲ್ಲಿ "ಏನು ಇಷ್ಟು ಬೇಗ  ಎದ್ದುಬಿಟ್ಟಿದ್ದೀಯ ?" ಎಂಬುವ ಪ್ರಶ್ನೆ ಬಂತು.. ಹಿಂದೆ ತಿರುಗಿ ನೋಡಿದರೆ, ಜೊತೆಯಲ್ಲಿ ಓದಿದ ಮತ್ತೊಬ್ಬ ಗೆಳೆಯ. "ಹಾಂ.. ದಿನಾ ಬೇಗ ಏಳ್ತೀನಿ ನಾನು.. ಅಭ್ಯಾಸಬಲ.."

ಸರಿ.. ಮತ್ತೆ ಅವರ ಕೋಣೆಯತ್ತ ಕಳ್ಳಗನ್ನು ಹಾಯಿಸುವ ತವಕ ಪುಟಿದೆದ್ದಿತು ಅವಳಿಗೆ.. ಅವತ್ತಿನ ಪ್ರವಾಸ ವಿವರಗಳನ್ನು ಮಾತಾಡುತ್ತ ಕೋಣೆಯತ್ತ ಕಣ್ಣು ಹೋಯಿತು.. "ಛೆ! ಪಾಪಿ ಕತ್ತಲೆ, ಈ ಬಾರಿ ನೀನು ಕೈಯ್ಯ ಕೊಡಬೇಕಾ? ಇಷ್ಟೊಂದು ಜನ ಇಲ್ಲಿ ಯಾರು ಅವನು? " 

ಇಬ್ಬರು ಕಿಟಕಿ ಹತ್ತಿರ ಹೆಜ್ಜೆ ಹಾಕಿದರು.. ಹೊರಗೆ ಮಬ್ಬು ಕವಿದ ವಾತಾವರಣ, ಹಸಿರು ಹೊದ್ದ ಬೆಟ್ಟ, ಚಳಿ ಗಾಳಿ, ಹಕ್ಕಿಯ ಚಿಲಿಪಿಲಿ, ಮೋಡಗಳ ತೂಗಾಟ ಮನೋಹರ ಎನ್ನಿಸಿತು.. ಸ್ವಲ್ಪ ಹೊತ್ತು ಮಾತಾಡಿ, ಸ್ನಾನ ಮಾಡಿ ಬರುತ್ತೇನೆಂದು ಹೋದ.. 
ಅವಳಿಗೆ ಆ ವಾತಾವರಣದಲ್ಲಿ ಹಾಡು ಹಾಡ ಬಯಸಿತು.. ಮೆಲು ದನಿಯಲ್ಲಿ ಹಾಡಲು ಆರಂಭಿಸಿದಳು.. ಸಾಕಷ್ಟು ಹಾಡಿ, ಈಗಲಾದರು ಹೊರಡುತ್ತೀನಿ ಸ್ನಾನಕ್ಕೆ ೬.೦೦ ಆಗುತ್ತಾ ಬಂತು ಎಂದು ತಿರುಗಬೇಕು ಇನ್ನೇನು.. ಅವನು ಕಂಡನು!

ಅವಳ ಎದೆ ಬಡಿತ ಹೆಚ್ಚಿತು, "ಏನು ಮಾಡಲಿ? ಏನು ಮಾತಾಡೋದು? ಯಾರಾದರು ನಾವಿಬ್ಬರೇ ಮಾತಾಡೋದು ನೋಡಿ ತಪ್ಪು ತಿಳಿದರೆ? " ಅವನನ್ನು ನೋಡಲೇ ಇಲ್ಲವೇನೋ ಎನ್ನುವ ಹಾಗೆ, ಕಿಟಕಿಯ ಬಳಿ ಮತ್ತೆ ಹೆಜ್ಜೆ ಹಾಕುತ್ತ.. "ಎಲ್ಲಿ ಜಾರಿತೋ ಮನವು.." ಮೆಲು ದನಿಯಲ್ಲಿ ಹಾಡಲು ಶುರು ಮಾಡಿದಳು..

"ಅವನು ಹತ್ತಿರ ಬರುತಿದ್ದಾನೆ, ಎನೆನ್ನಬಹುದು? ಚನ್ನಾಗಿ ಹಾಡುತ್ತೀಯ.. ? ಯಾವಾಗಿಂದ ಕಲಿತದ್ದು..? "
ಅವನು ಬಂದೆ ಬಿಟ್ಟ, ಅವಳಿಗೋ ಉಸಿರು ಒಂದು ಕ್ಷಣ ಇಲ್ಲದಂತಾಯಿತು, ಹಿಂದಿನಿಂದ ಏನಾದರೂ ಕೀಟಲೆ ಮಾಡಿದರೆ ಅಂತ ಯೋಚಿಸುವುದರಲ್ಲಿ ಅವಳ ಹಾಡು ನಿಂತಿತ್ತು, ಅವನ ಮುಖದ ಮುಂದೆ ಅವಳ ಮುಖವಿತ್ತು..

"ಯಾವ ಹಾಡು?" ಎಂದ.. "ಯಾವುದೊ ಗೊತ್ತಿಲ್ಲ.. ಎದ್ದಿದ್ದು ಇಗಲೇನ? ನಿಮ್ಮ ಗೆಳೆಯ ಇಷ್ಟು ಹೊತ್ತು ಇಲ್ಲೇ ಇದ್ದ.. ಮಾತಾಡ್ತಿದ್ವಿ"  ಎಂದು ಒಂದೇ ಸಮ ನೀರು ಸುರಿದ ಹಾಗೆ ಮಾತಾಡಿದಳು..

ಅವನು ತುಸು ನಕ್ಕು.. "ಯಾವ ಹಾಡು ಹಾಡ್ತಿದ್ದಿರಿ ಹೇಳಿ? ಮಾತು ಮರಿಸಬೇಡಿ" ಅವಳಿಗೇಕೋ ಬಹಳ ನಾಚಿಕೆಯಾಯಿತು.. "ಥೂ.. ಯಾಕಾದರೂ ಹಾಡಬೇಕಿತ್ತು.." ಮನಸ್ಸು ಹೇಳಿದ್ದು ಬುದ್ಧಿ ಕೇಳಲ್ಲ.. ಬುದ್ಧಿ ಹೇಳಿದ್ದು ಮನಸು ಕೇಳಲ್ಲ.. 

"ಈಗೇನು ಹೇಳುತ್ತಿರ ಇಲ್ಲವೋ ?" ಎಂದು ಜೋರು ಮಾಡಿದಾಗಂತೂ ಅವಳಿಗೆ ಎದೆ ತುಸುಕ್ ಎಂದಿತು.. "ಜೋಗಿ ಜಂಗಮರೆ.. ಅಂತ ಅದೊಂದು ಭಾವ ಗೀತೆ.. ಸ್ನಾನ ಮಾಡಿ ತಾಯರಾಗೋಣ.. ತಡ ನಮ್ಮಿಂದ ಆಗೋದು ಬೇಡ" ಎಂದು ಹೇಳುತ್ತಾ ಅಲ್ಲಿಂದ ಕಾಲು ಕಿತ್ತಳು..

ದಡ ಬಡ ಅವಳ ಕೋಣೆಯತ್ತ ಹೆಜ್ಜೆ ಹಾಕಿದಳು.. "ತಡ ಆಗೋದು ನಿನ್ನಿಂದಾನೆ" ಎಂದಿತು ಅವಳ ಮನ..   

Monday, 18 April 2011

ಆಟೋ ತತ್ವಗಳು

ನಾನು ಬೆಂಗಳೂರಿನ ಕಂಡ ಆಟೋ-(ಓಟ)ಗಳಲ್ಲಿ ಕೆಲವು ಆಟೋಗಳ ಹಿಂದೆ ನುಡಿ ಮುತ್ತುಗಳು/ ಅನುಭವ ಮಾತುಗಳು/ ಜ್ಞಾನೊದಯಗಳನ್ನು/ತತ್ವಗಳನ್ನು ಗಮನಿಸಿದೆ. ಕೆಲವು ನಗು ತರೆಸಿದರೆ, ಕೆಲವು ಯೋಚನೆ ಲಹರಿಯನ್ನು ಹುಟ್ಟು ಹಾಕಿತ್ತು..
ಅದರಲ್ಲಿ ಆಯ್ದ ಬರಹಗಳು ಹೀಗಿವೆ..
------------------------------------------------------------------------------------


ಎದೆ ಮುಟ್ಟಿದರೆ ಚಿನ್ನತೊಡೆ  ತಟ್ಟಿದರೆ  ಗುನ್ನ

ಇದ್ದರೆ ಇರಬೇಕು ಕವಿ, ಆದರೆ ಕೊರಿಬಾರದು ಕಿವಿ

ಮಚ್ಚಲ್ಲಿ ಬಿದ್ರೆ ಒಂದೇ ಏಟು, ಪ್ರೀತಿಲ್ಲಿ ಬಿದ್ರೆ ದಿನಾ ಏಟು

ಪ್ರೀತ್ಸೋದು ಇಷ್ಟ ಕಣೇ, ಹೇಳೋದು ಕಷ್ಟ ಕಣೇ

ನಾಟ್ಯ ರಾಣಿ, 90(Ninety) ರಾಜ

ವಾಹನದ ಹಿಂದೆ ಹೋದರೆ ಧೂಳು, ಹುಡುಗಿಯ ಹಿಂದೆ ಹೋದರೆ ಗೋಳು

ಹೆಣ್ಣೊಂದು ಬಣ್ಣದ ಚಿಟ್ಟೆ, ಅದರ ಹಿಂದೆ ಹೋದರೆ ಕೆಟ್ಟೆ

ಹುಡುಗಿಯ ನಗೆ, ಹುಡುಗನಿಗೆ ಹೊಗೆ

ಅವಳು ಕಂಡಳು ಸೋತೆ.. ಸಿಕ್ಕಳು ಸತ್ತೆ!

ಹಾರೋ ಹಕ್ಕಿಗೆ ಅಲಂಕಾರ, ಪ್ರೀತ್ಸೋ ಹುಡುಗಿಗೆ ದುರಹಂಕಾರ

ಹುಟ್ಟು ಉಚಿತ, ಸಾವು ಖಚಿತ, ಪ್ರೀತಿಯೊಂದೇ ಶಾಶ್ವತ
ಪ್ರೀತ್ಸಿದ್ರೆ ದಾಸ, ಇಲ್ಲದಿದ್ರೆ  ಗೂಸ.. 
ಪ್ರೀತಿಸುವ ಮುನ್ನ, ಯೋಚಿಸು ಚಿನ್ನ..

Believe a snake, Not a girl

--ಸಹನೆ-ಯಿಂದ