ಅಂದು ಭಾನುವಾರ. ವಿದೇಶದಿಂದ ಗೆಳೆಯರೊಬ್ಬರು ಬಂದಿದ್ದರು. ಅವರಿಗೆ ನಮ್ಮ ದೇಶದ ಬಗ್ಗೆ ತಿಳಿದುಕೊಳ್ಳೋ ಆಸಕ್ತಿ. "ವಿಶ್ವ ಭೂಪಟದ ಮೇಲೆ ಇರುವ ದೇಶಗಳಿಗಿಂತ ಭಾರತ ಹೇಗೆ ವಿಭಿನ್ನ?" ಎಂದು ಕೇಳಿದರು. ನಾನು ನಮ್ಮ ಅಖಂಡ ಭಾರತದ ಭವ್ಯ ಚರಿತೆ, ಏಕತೆಯಲ್ಲಿ ಅನೇಕತೆ, ನಮ್ಮ ಸಂಗೀತ, ಸಾಹಿತ್ಯ, ಕಲೆ ಬಗ್ಗೆ ಎಲ್ಲಾ ಹೇಳಿ ಕೊಂಡಾಡಿದೆ. ಅವರು ಖುಷಿ ಪಟ್ಟರು. ಆದರೆ, ಎನ್ನ ಮನಸಿನ ಒಂದು ಅಂಚಿನಲ್ಲಿ ಅಪರಾಧಿ ಮನೋಭಾವ ಕಾಡತೊಡಗಿತು.
ನಮಗೆ ನಮ್ಮತನದ ಬಗ್ಗೆ ಅಭಿಮಾನವಿಲ್ಲದಿರೆ, ಮತ್ತಾರಿಂದ ಅಪೇಕ್ಷಿಸಲು ಸಾಧ್ಯ? ಇಡೀ ಭೂಮಂಡಲದಲ್ಲಿ ಅತ್ಯಂತ ಪ್ರಾಚೀನ ನಾಗರೀಕತೆಯ ಎಂಬ ಹೆಗ್ಗಳಿಕೆ ಒಂದೇ ಸಾಕೆ? ಆ ನಾಗರೀಕತೆ ವಿಕಸನ ಆಗಿದೆ, ಆಗಬೇಕು. ಆ ವಿಕಸನ ಪ್ರಕೃತಿ ಸಹಜವಾಗಿ ಇರಲಿ. ಅನುಕರಣೆ ಬೇಡ. ನಮ್ಮ ಸಂಸ್ಕೃತಿ, ನಮ್ಮತನದ ಬಗ್ಗೆ ನಮಗೆ ಹೆಮ್ಮೆ ಇರಲಿ. ಅದನ್ನು ಉಳಿಸುವ, ಆದರೆ ಬೆಳೆಸುವ ಪ್ರಯತ್ನ ಮಾಡೋಣ. ನಮ್ಮ ಮಕ್ಕಳಿಗೆ ಈ ಭವ್ಯ ಭಾರತ ಇಂದಿಗೂ ವೈಭವಾಗಿದೆ ಎಂದು ತಿಳಿಸುವ ಸುಯೋಗ ನಮಗಿರಲಿ.
ನಮ್ಮ ದೇಶ ಭೂರಮೆಯಲ್ಲೇ ಹೇಗೆ ಶೋಭಾಯಮಾನವಾಗಿ ಬೆಳಗುತ್ತದೆ ಎಂದು ತಿಳಿಸಲು ನಾವು ನಮ್ಮ ಪೂರ್ವಜರು ಮಾಡಿದ ಸಾಧನೆಯನ್ನು ನೆನೆಯಬೇಕು. ನಮಗೆ ಉಳಿದಿರುವುದು ಗತಕಾಲ ವೈಭವ ಅಷ್ಟೇ. ಈ ಸಂಸ್ಕೃತಿ ಉಳಿಸಲು, ಬೆಳೆಸಲು ಶತಮಾನದ ಕೊಡುಗೆ ಏನು? ಎಂದು ನೆನೆದರೆ, ಸಿಗುವ ಉತ್ತರಗಳು ಬೆರಳೆಣಿಕೆಯಷ್ಟೇ ಇರಬಹುದು. ಇಂದಿನ ಜೀವನದ ಗತಿಯಲ್ಲಿ ಯಾವುದಕ್ಕೂ ಬೆಲೆ ಇಲ್ಲ. ನಮ್ಮ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಉಳಿಸುವುದು ಬಿಡಿ, ತಿಳುವಳಿಕೆಗೂ ಬರಗಾಲ. ಇನ್ನ ಬೆಳವಣಿಗೆ ಅಂತೂ ಅಂಗವೈಕಲ್ಯದಿಂದ ಬಳಲುತ್ತಿದೆ. ಭಾರತಾಂಬೆಯ ಪುಣ್ಯದ ಬುತ್ತಿ ಇನ್ನ ತುಂಬಿರುವುದರಿಂದ ಕೆಲವು ಮಹಾಶಯ, ಮಹಾನೀಯರು ನಮ್ಮ ಸಂಸ್ಕೃತಿಗೆ ಉಸಿರು ತುಂಬುತ್ತಿದ್ದಾರೆ.
ಭಾರತದ ಬಗ್ಗೆ ಮಾತಾಡುವುದು ಭಾರಿಯಾಗುತ್ತದೆ. ನಮ್ಮ ಪುಟ್ಟ ಕರ್ನಾಟಕ ರಾಜ್ಯದ ಸಂಸ್ಕೃತಿಯ ಒಂದು ಸಣ್ಣ ಭಾಗವಾದ ನೃತ್ಯದ ಬಗ್ಗೆ ಕಣ್ಣು ಹಾಯಿಸೋಣ. ನಮ್ಮಲ್ಲಿ ಇರೋ ಕುಣಿತಗಳು ಎಷ್ಟು? ಡೋಲು ಕುಣಿತ, ಕಂಸಾಳೆ ನೃತ್ಯ, ಸೋಮನ ಕುಣಿತ, ಸುಗ್ಗಿ ಕುಣಿತ, ಜಗ್ಗಹಲಿಗೆ ಕುಣಿತ, ಕರಡಿ ಮಜಲು, ಗೊಂದಲಿಗರ ಆಟ, ಭೂತ ಆರಾಧನೆ, ಯಕ್ಷಗಾನ, ಹಗಲು ವೇಷಗಾರರು, ಗೊರವರ ಕುಣಿತ, ನಾಗಮಂಡಲ, ಕರಗ, ಗಾರುಡಿ ಗೊಂಬೆ, ಜೋಡು ಹಳಿಗಿ, ವೀರಗಾಸೆ ನೃತ್ಯ ಇತ್ಯಾದಿ ಇತ್ಯಾದಿ. ರಾಜ್ಯದ ವಿವಿಧೆಡೆ, ವಿವಿಧ ಜನಾಂಗಗಳಲ್ಲಿ ಈ ನೃತ್ಯ ಪ್ರಕಾರಗಳು ಬೆಳೆದುಕೊಂಡು ಬಂದಿದೆ. ಅಮೇರಿಕೆ ಏನಾಗುತ್ತಿದೆ ಎಂದು ಕ್ಷಣ ಮಾತ್ರದಲ್ಲಿ ತಿಳಿಯುವ ಈ ಯುಗದಲ್ಲಿ, ನಮ್ಮ ರಾಜ್ಯದಲ್ಲಿ ಇರುವ ನೃತ್ಯಗಳು ಯಾವುವು ಎಂದು ತಿಳಿದಿಲ್ಲ ಎಂದರೆ ವಿಪರ್ಯಾಸವೇ ವಿನಃ ಮತ್ತೇನು ಅಲ್ಲ. ಈ ವರ್ತನೆಗೆ ಕಾರಣವೇನು ಎಂದು ಯೋಚಿಸಿದರೆ ಸಿಗುವ ಸುಲಭ ಉತ್ತರ ನಿರಾಸಕ್ತಿ.
ಈ ಎಲ್ಲಾ ಜಾನಪದ ಕಲೆಗಳು ಜನಜೀವನದ ಅವಿಭಾಜ್ಯ ಅಂಗವಾಗಿ ಮೆರೆಯುತಿತ್ತು. ಹಳ್ಳಿಯ ಬದುಕನ್ನು ಶ್ರೀಮಂತಗೊಳಿಸುತಿದ್ದ ಸಂಪತ್ತು ಇವು. ಜಾತ್ರೆ-ಉತ್ಸವಗಳಲ್ಲಿ, ಮದುವೆ-ಸಮಾರಂಭಗಳಲ್ಲಿ ಈ ಕಲೆಗಳಿಗೆ ಪ್ರೋತ್ಸಾಹ ಸಿಗುತಿತ್ತು. ಕಲಾವಿದರಿಗೆ ಜೀವನ ನಡೆಸುವಷ್ಟು ಸಂಭಾವನೆಗೂ ಕಡಿಮೆ ಇರಲಿಲ್ಲ. ಹಳ್ಳಿಗಳು ಪ್ರಗತಿಯ ಪಥ ತುಳಿಯುವ ಹುಮ್ಮಸ್ಸಿನಲ್ಲಿ ಈ ಕಲೆಗಳನ್ನು ಪಯಣದ ಹಾದಿಯಲ್ಲಿ ತುಸು ಭಾರವಾಗುವ ಸಾಮಾನು ಎಂದು ಬಿಟ್ಟು ಹೋದವರೇ ಹೆಚ್ಚು. ಜನರು "ಸಮಯದ ಅಭಾವ"ದಿಂದ ಈ ಕಲಾವಿದರನ್ನು ತಮ್ಮ ಸಂಭ್ರಮಗಳಲ್ಲಿ ಭಾಗಿ ಮಾಡಿಕೊಳ್ಳುವುದನ್ನು ಬಿಟ್ಟರು. ಕಲೆಯನ್ನೇ ನಂಬಿ ಜೀವನ ಮಾಡುವವರ ಹೊಟ್ಟೆಗೆ ಭಾರಿ ಎಟೆ ಬಿಟ್ಟು. ಹಲವು ಕಲಾವಿದರು ತಮ್ಮ ಮಕ್ಕಳಿಂದ ಈ ಕಲೆ ಮುಂದುವರಿಸಲು ಇಚ್ಚಿಸಲೇ ಇಲ್ಲ. (ಈ ಕಲೆಗಳು ಪಾರಂಪರಿಕವಾಗಿಯೇ ಬೆಲಿಯುದು ಹೆಚ್ಚು). ಅದನ್ನು ತಪ್ಪು ಎನ್ನುವುದೂ ಸಾಧ್ಯವಿಲ್ಲ. ಈ ಭೂಮಿಯಲ್ಲಿ ಇರೋ ಪ್ರತಿಯೊಬ್ಬ ತಂದೆ ತಾಯಿಯ ಆಸೆ, ಮಕ್ಕಳು ಸುಖವಾಗಿ ಇರಬೇಕೆಂದು. ಹೀಗೆ ನೃತ್ಯ ಕಲೆ ಅವನತಿಯ ಪಥ ಹಿಡಿದಿದೆ. ಮತ್ತೆಲ್ಲಾ ಕ್ಷೇತ್ರಗಳಲ್ಲೂ ಸದೃಶ ಕಥೆಯೇ!
ಸಂಸ್ಕೃತಿ ಎಂಬುವುದು ಪ್ರಕೃತಿ ಸಹಜ ರೀತಿಯಲ್ಲಿ ಬೆಳೆದಿರುತ್ತದೆ. ಅಲ್ಲಿನ ಜನರ ಆಹಾರ ಪದ್ದತಿಗಳಾಗಲಿ, ಮನೋರಂಜನಾ ಕಲೆಗಳಾಗಿಲಿ, ಹಾಡು-ಕುಣಿತಗಲಾಗಲಿ, ದೇವರ ಕಲ್ಪನೆಯಾಗಲಿ, ವಸ್ತ್ರ-ವಿನ್ಯಾಸವಾಗಲಿ.. ಪ್ರತಿಯೊಂದನ್ನೂ ಆ ಸ್ಥಳಕ್ಕೆ ಅನುಗುಣವಾಗಿ ಸಮಾಜ ಹೆಣೆದುಕೊಂಡು ಬಂದಿರುತ್ತದೆ.ಪರ ಸಂಸ್ಕೃತಿಯಿಂದ ಪ್ರೇರಿತರಾಗುವುದು ಸಹಜವೇ. ಆದರೇ, ನಮ್ಮ ಬದುಕಿಗೆ ಹೊಂದುತ್ತದೆಯೇ ಇಲ್ಲವೇ ಎಂದು ಪರಾಮರ್ಷೆಯೇ ಮಾಡದೆ ಕುರುಡು ಅನುಚರಣೆ ಮಹಾ ಅಪರಾಧ. ಪರಕೀಯ ಪ್ರಭಾವದಿಂದ ಈ ಎಲ್ಲಾ ರೀತಿ-ನೀತಿಗಳು ಬದಲಾದರೆ ಹುಲಿಯನ್ನು ಕಂಡು ನರಿ ಬರೆ ಹಾಕಿಕೊಂಡಂತೆ ಆಗುತ್ತದೆ. ಬಾರೆ ಹಾಕಿಕೊಂಡ ನರಿ ಕೊನೆಗೆ ನರಿಯ ಹಾಗೂ ಕಾಣುವುದಿಲ್ಲ, ಹುಲಿಯ ಹಾಗೂ ಕಾಣುವುದಿಲ್ಲ. ಎರಡೂ ಕಡೆ ನಿಲುವಿರದೆ ದುರ್ಬರ ಪರಿಸ್ಥಿತಿ ಎದುರಾಗುತ್ತದೆ. ಭಾರತ ವರ್ಷ ಭೂಪಟದಲ್ಲಿ ಕಂಗೊಳಿಸದೇ, ಕಂಗಾಲಾಗಿ ಕಾಣುತ್ತದೆ.
ನಮ್ಮ ಸಂಭ್ರಮಗಳಲ್ಲಿ ನಮ್ಮ ಕಲೆಗಳನ್ನು ಮೆರೆಸಿ ಒಂದು ಹೊಸ ಪ್ರವೃತ್ತಿ ಸೃಷ್ಟಿಸಬೇಕು.ನಮ್ಮ ಅಭಿಮಾನಕ್ಕೆ ವಾಕ್ಬಲ ಕೊಟ್ಟು ಪ್ರಚಾರಗಿತ್ತಿಸಬೇಕು. ಹೀಗೆ ಮಾಡಿದ್ದಲ್ಲಿ ಕಲಾವಿದರಿಗೆ ನೈತಿಕ ಹಾಗೂ ಆರ್ಥಿಕ ಬೆಂಬಲ ದೊರೆಯುತ್ತದೆ. ನಾಟಕ ಶಾಲೆಯ ತರಹ, ನೃತ್ಯ ಶಾಲೆಗಳು ಆರಂಭವಾಗುತ್ತದೆ. ನೃತ್ಯ, ನಾಟಕ, ಕಲೆ, ಸಾಹಿತ್ಯ ಎಲ್ಲಾ ಜೀವನ ನಡೆಸಲು ಒಂದು ಮಾರ್ಗ ಎಂದು ಜನರಿಗೆ ನಿಧಾನವಾಗಿ ಮನನ ಆಗುತ್ತದೆ.
ನಮಗೆ ನಮ್ಮತನದ ಬಗ್ಗೆ ಅಭಿಮಾನವಿಲ್ಲದಿರೆ, ಮತ್ತಾರಿಂದ ಅಪೇಕ್ಷಿಸಲು ಸಾಧ್ಯ? ಇಡೀ ಭೂಮಂಡಲದಲ್ಲಿ ಅತ್ಯಂತ ಪ್ರಾಚೀನ ನಾಗರೀಕತೆಯ ಎಂಬ ಹೆಗ್ಗಳಿಕೆ ಒಂದೇ ಸಾಕೆ? ಆ ನಾಗರೀಕತೆ ವಿಕಸನ ಆಗಿದೆ, ಆಗಬೇಕು. ಆ ವಿಕಸನ ಪ್ರಕೃತಿ ಸಹಜವಾಗಿ ಇರಲಿ. ಅನುಕರಣೆ ಬೇಡ. ನಮ್ಮ ಸಂಸ್ಕೃತಿ, ನಮ್ಮತನದ ಬಗ್ಗೆ ನಮಗೆ ಹೆಮ್ಮೆ ಇರಲಿ. ಅದನ್ನು ಉಳಿಸುವ, ಆದರೆ ಬೆಳೆಸುವ ಪ್ರಯತ್ನ ಮಾಡೋಣ. ನಮ್ಮ ಮಕ್ಕಳಿಗೆ ಈ ಭವ್ಯ ಭಾರತ ಇಂದಿಗೂ ವೈಭವಾಗಿದೆ ಎಂದು ತಿಳಿಸುವ ಸುಯೋಗ ನಮಗಿರಲಿ.