Wednesday, 20 April, 2011

ವಿಧಿಯ ಆಟ - ಅವಳ ಅವನ ಮಿಲನ

ಗೆಳೆಯರೊಂದಿಗೆ ಚಲನಚಿತ್ರ ನೋಡುವುದೇ ಕಡಿಮೆ. ಅಂದು ಅವಳು ಯಾವುದೊ ಹೊಸ ಚಿತ್ರಕ್ಕೆ ಬರುತ್ತೀನಿ ಎಂದು ಸಮ್ಮತಿ ಸೂಚಿಸಿದ್ದಳು. ಅವಳಿಗೆ ಬಿಳಿ ಚುಡಿದಾರ ಧರಿಸುವ ಮನಸಾಯಿತು.. ಅದರ ತಂಗಿಯರೆಲ್ಲ (ಬಿಳಿ ಓಲೆ, ಬಿಳಿ ಬಳೆ, ಬಿಳಿ ಸರ, ಬಿಳಿ ಹಣೆಬೊಟ್ಟು) ಇದ್ದಾರ ನೋಡಿದಳು.. ಹಣೆಯದು ಇರಲಿಲ್ಲ, ಮರುಕ್ಷಣವೇ ಅಂಗಡಿಗೆ ಧಾಳಿ ಮಾಡಿ ತಂದಳು.. ಅಲಂಕಾರ ಶುರುವಾಯಿತು.. "Sajna Hai Mujhe Sajna ke li a" ಹಾಡಿಕೊಂಡು.. ಅಲಂಕಾರ ಮುಗಿಸಿ, ಕನ್ನಡಿ ನೋಡುತ್ತಾ.. "ಆಹಾ, ಸುಂದರಿ.. ನಿನ್ನ ನೋಡಿದರೆ ರಾಜಕುಮಾರ ಎತ್ತಿ ಹಾಕಿಕೊಂಡು ಹೋಗುತ್ತಾನೆ.. " ಎಂದು ಪಟ್ ಅಂತ ಕನ್ನಡಿಯ ಸುಂದರಿಗೆ ಮುತ್ತನ್ನಿತ್ತು, ಬಿಳಿ ಕೈ-ಚೀಲದಲ್ಲಿ cell ಮತ್ತೆ ೧೫೦ ರುಪಾಯನ್ನು ಹಾಕಿಕೊಂಡು ಕೆಳಗೆ ಹೋದಳು..

ಮನೆಯಲ್ಲಿದ್ದವರಿಗೆ ತಿಳಿಸಿ, ಅವಳ ರಥ ಏರಿದೊಡನೆ ಅವಳಿಗೆನೋ ಮಿಂಚಿನ ಪುಳಕವ. "ಅದು ಚಲನಚಿತ್ರಕ್ಕೆ ಹೋಗುವ ಸಂಭ್ರಮವೋ ಅಥವಾ ಹೊಸ ಪರಿಚಯದ ಕುತೂಹಲವೋ?" . ಅವಳ ಬಾಲ್ಯದಿಂದ ಅವಳು ೧೦ ಚಿತ್ರ ಚಿತ್ರ ಮಂದಿರದಲ್ಲಿ ನೋಡಿದ್ದರೆ ಹೆಚ್ಚು.. ಹೆಚ್ಚು ಜನರನ್ನ ಹತ್ತಿರವೂ ಸೇರಿಸಿರಲಿಲ್ಲ.. ಆದ್ದರಿಂದ ಯಾವುದು ಅನ್ನುವುದು ತಿಳಿಯಲಿಲ್ಲ..

ದಾರಿಯುದ್ದಕ್ಕೂ ಹಾಡನ್ನು ಹಾಡುತ್ತ ಸಾಗಿದಳು.. ಇನ್ನೇನು ಚಿತ್ರ ಮಂದಿರ ಸೇರಬೇಕು ಅಷ್ಟರಲ್ಲಿ ಮಳೆ ಬಂತು.. "ಅಯ್ಯೋ.. ದೇವರೇ.. ನಾನು ಬಿಳಿ ಬಟ್ಟೆ ಹಾಕಿಕೊಂಡಾಗೆ ಮಳೆ ಬರಬೇಕಾ?"  ಎಂದು ಗೊಣಗಾಡಿದಳು.. "ಎಷ್ಟು ಬೇಗ ಆಗತ್ತೋ ಅಷ್ಟು ಬೇಗ ಸೇರೋಣ" ಎಂದು ಯೋಚಿಸಿ ಚಿತ್ರಮಂದಿರ ಸೇರಿದಳು.. 

Gate ಒಳಗೆ ಹೋಗುತ್ತಿದ್ದಂತೆ ಕೆಲವು ಪರಿಚಯದ ಮುಖಗಳು ಕಂಡವು, "ಬಂದೆ.. Park ಮಾಡಿ ಬರುತ್ತೀನಿ" ಎಂದಳು.. ಅವಳ ಮನಸ್ಸು ಆ ಅಪರಿಚಿತನ ಪರಿಚಯಕ್ಕೆ ಕಾಯುತ್ತಿತ್ತು.. ಅವನ ಬಗ್ಗೆ ಬಹಳ ಕೇಳಿದ್ದಳು.. ಅವನ ರೂಪು ರೇಷೆಯ ಬಗ್ಗೆ ಚಿತ್ರ ಮನದಲ್ಲಿತ್ತು.. ಅವನು ಇತರರಿಗಿಂತ ಭಿನ್ನ, ಯೋಚನಾ ಲಹರಿಯೇ ಬೇರೆ ಎನಿಸಿತ್ತು ಅವಳಿಗೆ..ಅವಳು ಕೇಳಿದ ಮಾತುಗಳಿಂದ..

ಮೆಲ್ಲನೆ ನಡೆದು ಹೋದಳು, ಗೊತ್ತಿರೋ ಮುಖಗಳ ನಡುವೆ ಅವಳೇ ಕಂಡುಹಿಡಿಯಲು ಸಾಧ್ಯವಾ ನೋಡಿದಳು.. ಊಹೂಂ.. ಗೊತ್ತಾಗಲಿಲ್ಲ..  "ಬಿಡು.. ಯಾರೋ ಏನೋ.. ತುಂಬಾ ಉತ್ಸಾಹ ಒಳ್ಳೆಯದಲ್ಲ.." ಎಂದುಕೊಂಡಳು..

ಗೊತ್ತಿರುವರು ಹೊಸ ಮುಖಗಳ ಪರಿಚಯ ಮಾಡಿಸ ತೊಡಗಿದರು.. "ಅವನು" ಎಂದಾಗ ಕಿವಿ ನೆಟ್ಟಗಾಯಿತು.. ಆ ಚಿತ್ರ ಈ ಪಾತ್ರ ಸ್ವಲ್ಪ ಹೊಂದುತ್ತಿತ್ತು.. ಇವಳು ಎಲ್ಲರನ್ನು ಮಾತಾಡಿಸಿದ ಹಾಗೆ ಕಿವಿ ಇಂದ ಕಿವಿ ವರೆಗೆ ನಕ್ಕು "Hi " ಎಂದು ಕೈ ಅಲ್ಲಾಡಿಸಿದಳು.. ಅವನಿಂದ ಗಂಭೀರ ಮುಖಭಾವ, ಒಂದು ಕುತ್ತಿಗೆ ಅಲ್ಲಾಡಿಸುವುದರಲ್ಲಿ ಉತ್ತರ ಬಂದಿತ್ತು.. ಅವಳ ಉತ್ಸಾಹದ ಬೆಂಕಿಗೆ ನೀರು ಬಿದ್ದಿತ್ತು, ಕಿವಿಯ ಹತ್ತಿರ ಇದ್ದ ತುಟಿಗಳು ಮೆಲ್ಲನೆ ಅದರ ಜಾಗಕ್ಕೆ ಮರಳಿದವು.. "ಎಷ್ಟು ಕೊಬ್ಬು ಮಗನಿಗೆ, ಒಂದು ಬಾಯಿ ಬಿಟ್ಟು Hi  ಹೇಳೋಕ್ಕೆ ಆಗೋಲ್ವ? ಮಾತಾಡಿಸಿದರೆ ಕೇಳು ನಿನ್ನ.. ಮಗನೆ.. ನೀನೇನೋ ಬಹಳ ಚಂದದ ಮನುಷ್ಯ.. ಅಂತ ತಿಳಿದಿದ್ದೆ.. ನಿನ್ನನ್ನ ಅಷ್ಟು ಏರಿಸಲೇ ಬಾರದಿತ್ತು.. ನನ್ನದೇ ತಪ್ಪು.. ಥೂ.. ನನಗೆ ಸರಿಯಾಗಿ ಬುದ್ಧಿ ಕಲಿಸಿದೆ" ಎಂದು ಮನಸಿನಲ್ಲಿ ಬೈಕೊಂಡು ಚಿತ್ರಮಂದಿರದ ಒಳಗೆ ನಡೆದಳು..

ಅವಳು ಹೋಗಿ ಅವಳ ಗೆಳತಿಯರ ಪಕ್ಕ ಕೂತಾಗ ಅವಳ ಪಕ್ಕದ ಕುರ್ಚಿ ಖಾಲಿ ಇದ್ದದ್ದು ನೋಡಿದಳು.. "ಅವನೇನಾದರು ಬಂದರೆ  ಸರಿ ಇರೋಲ್ಲ " ಎಂದು ಮನಸಿನಲ್ಲಿ ಯೋಚಿಸಿದಳು, ಗೆಳತಿಯರೊಂದಿಗೆ ಮಾತಾಡಲು ಶುರು ಮಾಡಿದಳು.. "Do you mind if I sit here? " ಎಂಬ ಗಂಡು ಧ್ವನಿ ಬಂದಾಗ, ಅವಳ ಯೋಚನೆ ನಿಜವಾಗಿತ್ತು.. ಅವನು ಕೇಳುತಿದ್ದನು.. ಇವಳು ಮತ್ತೆ ಕಿವಿ ಇಂದ ಕಿವಿಗೆ ನಕ್ಕು "No.. Not at all" ಎಂದಳು.. "ಎಲ್ಲಿ ಹೋಯಿತೇ ನಿನ್ನ ರೋಷ ಆವೇಶ ಎಲ್ಲ? ಹೇಡಿ ನೀನು.. ಅವನಿಗೆ ಕಣ್ಣಿಗೆ ಕಣ್ಣು ಎಂದರೆ ಏನು ಅಂತ ತೋರಿಸಬಹುದಿತ್ತು.. " ಅವಳಿಗೆ ಅವನ ಧ್ವನಿ ಬಹಳ ಇಷ್ಟ ಆಗಿಬಿಟ್ಟಿತ್ತು.. ಏನು ಮಾಡುವುದು.. ಬೇಡ ಅನ್ನೋ ಮನಸಾಗಲಿಲ್ಲ..

 ಆ ಮನುಷ್ಯನಿಗೆ ನಗುವುದಕ್ಕೂ ಬರುತ್ತದೆ ಅಂತ ಚಿತ್ರ ನೋಡುವಾಗ, ಯಾವುದೊ ತುಣುಕಿಲ್ಲಿ ಅವಳಿಗೆ ತಿಳಿಯಿತು..
ಚಿತ್ರದ ನಡುವೆ ಮಾತು ಆಡಲಿಲ್ಲ.. ಚಿತ್ರ ಮುಗಿಯಿತು, ಅಂದಿನ ಭೇಟಿ ಕೊನೆಯ ಕ್ಷಣಗಳನ್ನು ಏಣಿಸುತ್ತಿದ್ದಂತೆ,ಅವಳೇ ಮತ್ತೆ ಜೋರಾಗಿ ಕೈ ಅಲ್ಲಾಡಿಸುತ್ತಾ  "Bye " ಮಾಡಿ ಕಳುಹಿಸಿಕೊಟ್ಟಳು..

ಬುದ್ಧಿ ಯಾವಾಗ ಬರತ್ತೆ ನಿಂಗೆ? ಎಂದು ತಲೆ ಚೆಚ್ಚಿಕೊಂಡಿತು ಅವಳ ಬುದ್ಧಿ..

Tuesday, 19 April, 2011

ನಿನಗಾಗಿಯೇ ಹಾಡಿದೆ

ಹೊರಗಿನ ಕಿರುಚಾಟ ಎಬ್ಬಿಸಿತು.. ಕನಸಿನ ಲೋಕದಿಂದ ಇಹ ಲೋಕಕ್ಕೆ ಕಾಲಿಟ್ಟಳು.. ಎದ್ದು ನೋಡಿದರೆ ಉಳಿದವರೆಲ್ಲ ಮಲಗಿದ್ದರು.. ಕೈಯಲ್ಲಿ cell ಹಿಡಿದು ಹೊರಗೆ ಹೋದಾಗ ಮನಸು "ಅವನು ಎದ್ದಿರಬಹುದಾ? " ಅಂತ ಕೇಳುತಿತ್ತು.. ಯಾಕೋ ತಡೆಯಲಾಗಲಿಲ್ಲ, ಅವನು ಗೆಳೆಯರೊಂದಿಗೆ ಇದ್ದ ಕೋಣೆಯ ಬಳಿ ಬಂದು ನೋಡಿದರೆ ಬಾಗಿಲು ಮುಚ್ಚಿತ್ತು.. ಅವಳ ಪಾಲಿಗೆ ಅವನ ಮನಸಿನ ಹಾಗೆ.. ಆ ಕೋಣೆಯಲ್ಲಾದರೂ  ಯಾರು ಇದ್ದಾರೆ  ಎಂದು ತಿಳಿದಿತ್ತು.. ಆದರೆ ಅವನ ಮನಸಿನಲ್ಲಿ?

ನಿರಾಶಳಾಗಿ ಪುನಃ ತನ್ನ ಕೋಣೆಯತ್ತ ಹೆಜ್ಜೆ ಹಾಕುತ್ತ  ಅವಳ ಮನಸ್ಸು ಮತ್ತು ಬುದ್ಧಿ ಮಾತಾಡುತಿತ್ತು..
ಮ:  ಅವನು ಎದ್ದಿದ್ದರೆ, ಸ್ವಲ್ಪ ಮಾತಾಡಬಹುದಿತ್ತು
ಬು: ಏನೆಂದು ಮಾತಾಡುತಿದ್ದೆ? ಸುಮ್ಮನೆ ಸಾಮಾನ್ಯ ವಿಷಯದ ಬಗ್ಗೆ ಚರ್ಚೆ. ಅದು ಯಾವಾಗಲಾದರೂ ಮಾಡಬಹುದು
ಮ: ನನ್ನ ಎದೆ ತುಡಿಯುತ್ತಿದೆ, ಅವನ ಮಾತಿಗೆ.. ಅವನು ನನಗೇನಾಗಬೇಕು..
ಬು: ನಿನಗೆ ಅವನು...

ಅಷ್ಟರಲ್ಲಿ "ಏನು ಇಷ್ಟು ಬೇಗ  ಎದ್ದುಬಿಟ್ಟಿದ್ದೀಯ ?" ಎಂಬುವ ಪ್ರಶ್ನೆ ಬಂತು.. ಹಿಂದೆ ತಿರುಗಿ ನೋಡಿದರೆ, ಜೊತೆಯಲ್ಲಿ ಓದಿದ ಮತ್ತೊಬ್ಬ ಗೆಳೆಯ. "ಹಾಂ.. ದಿನಾ ಬೇಗ ಏಳ್ತೀನಿ ನಾನು.. ಅಭ್ಯಾಸಬಲ.."

ಸರಿ.. ಮತ್ತೆ ಅವರ ಕೋಣೆಯತ್ತ ಕಳ್ಳಗನ್ನು ಹಾಯಿಸುವ ತವಕ ಪುಟಿದೆದ್ದಿತು ಅವಳಿಗೆ.. ಅವತ್ತಿನ ಪ್ರವಾಸ ವಿವರಗಳನ್ನು ಮಾತಾಡುತ್ತ ಕೋಣೆಯತ್ತ ಕಣ್ಣು ಹೋಯಿತು.. "ಛೆ! ಪಾಪಿ ಕತ್ತಲೆ, ಈ ಬಾರಿ ನೀನು ಕೈಯ್ಯ ಕೊಡಬೇಕಾ? ಇಷ್ಟೊಂದು ಜನ ಇಲ್ಲಿ ಯಾರು ಅವನು? " 

ಇಬ್ಬರು ಕಿಟಕಿ ಹತ್ತಿರ ಹೆಜ್ಜೆ ಹಾಕಿದರು.. ಹೊರಗೆ ಮಬ್ಬು ಕವಿದ ವಾತಾವರಣ, ಹಸಿರು ಹೊದ್ದ ಬೆಟ್ಟ, ಚಳಿ ಗಾಳಿ, ಹಕ್ಕಿಯ ಚಿಲಿಪಿಲಿ, ಮೋಡಗಳ ತೂಗಾಟ ಮನೋಹರ ಎನ್ನಿಸಿತು.. ಸ್ವಲ್ಪ ಹೊತ್ತು ಮಾತಾಡಿ, ಸ್ನಾನ ಮಾಡಿ ಬರುತ್ತೇನೆಂದು ಹೋದ.. 
ಅವಳಿಗೆ ಆ ವಾತಾವರಣದಲ್ಲಿ ಹಾಡು ಹಾಡ ಬಯಸಿತು.. ಮೆಲು ದನಿಯಲ್ಲಿ ಹಾಡಲು ಆರಂಭಿಸಿದಳು.. ಸಾಕಷ್ಟು ಹಾಡಿ, ಈಗಲಾದರು ಹೊರಡುತ್ತೀನಿ ಸ್ನಾನಕ್ಕೆ ೬.೦೦ ಆಗುತ್ತಾ ಬಂತು ಎಂದು ತಿರುಗಬೇಕು ಇನ್ನೇನು.. ಅವನು ಕಂಡನು!

ಅವಳ ಎದೆ ಬಡಿತ ಹೆಚ್ಚಿತು, "ಏನು ಮಾಡಲಿ? ಏನು ಮಾತಾಡೋದು? ಯಾರಾದರು ನಾವಿಬ್ಬರೇ ಮಾತಾಡೋದು ನೋಡಿ ತಪ್ಪು ತಿಳಿದರೆ? " ಅವನನ್ನು ನೋಡಲೇ ಇಲ್ಲವೇನೋ ಎನ್ನುವ ಹಾಗೆ, ಕಿಟಕಿಯ ಬಳಿ ಮತ್ತೆ ಹೆಜ್ಜೆ ಹಾಕುತ್ತ.. "ಎಲ್ಲಿ ಜಾರಿತೋ ಮನವು.." ಮೆಲು ದನಿಯಲ್ಲಿ ಹಾಡಲು ಶುರು ಮಾಡಿದಳು..

"ಅವನು ಹತ್ತಿರ ಬರುತಿದ್ದಾನೆ, ಎನೆನ್ನಬಹುದು? ಚನ್ನಾಗಿ ಹಾಡುತ್ತೀಯ.. ? ಯಾವಾಗಿಂದ ಕಲಿತದ್ದು..? "
ಅವನು ಬಂದೆ ಬಿಟ್ಟ, ಅವಳಿಗೋ ಉಸಿರು ಒಂದು ಕ್ಷಣ ಇಲ್ಲದಂತಾಯಿತು, ಹಿಂದಿನಿಂದ ಏನಾದರೂ ಕೀಟಲೆ ಮಾಡಿದರೆ ಅಂತ ಯೋಚಿಸುವುದರಲ್ಲಿ ಅವಳ ಹಾಡು ನಿಂತಿತ್ತು, ಅವನ ಮುಖದ ಮುಂದೆ ಅವಳ ಮುಖವಿತ್ತು..

"ಯಾವ ಹಾಡು?" ಎಂದ.. "ಯಾವುದೊ ಗೊತ್ತಿಲ್ಲ.. ಎದ್ದಿದ್ದು ಇಗಲೇನ? ನಿಮ್ಮ ಗೆಳೆಯ ಇಷ್ಟು ಹೊತ್ತು ಇಲ್ಲೇ ಇದ್ದ.. ಮಾತಾಡ್ತಿದ್ವಿ"  ಎಂದು ಒಂದೇ ಸಮ ನೀರು ಸುರಿದ ಹಾಗೆ ಮಾತಾಡಿದಳು..

ಅವನು ತುಸು ನಕ್ಕು.. "ಯಾವ ಹಾಡು ಹಾಡ್ತಿದ್ದಿರಿ ಹೇಳಿ? ಮಾತು ಮರಿಸಬೇಡಿ" ಅವಳಿಗೇಕೋ ಬಹಳ ನಾಚಿಕೆಯಾಯಿತು.. "ಥೂ.. ಯಾಕಾದರೂ ಹಾಡಬೇಕಿತ್ತು.." ಮನಸ್ಸು ಹೇಳಿದ್ದು ಬುದ್ಧಿ ಕೇಳಲ್ಲ.. ಬುದ್ಧಿ ಹೇಳಿದ್ದು ಮನಸು ಕೇಳಲ್ಲ.. 

"ಈಗೇನು ಹೇಳುತ್ತಿರ ಇಲ್ಲವೋ ?" ಎಂದು ಜೋರು ಮಾಡಿದಾಗಂತೂ ಅವಳಿಗೆ ಎದೆ ತುಸುಕ್ ಎಂದಿತು.. "ಜೋಗಿ ಜಂಗಮರೆ.. ಅಂತ ಅದೊಂದು ಭಾವ ಗೀತೆ.. ಸ್ನಾನ ಮಾಡಿ ತಾಯರಾಗೋಣ.. ತಡ ನಮ್ಮಿಂದ ಆಗೋದು ಬೇಡ" ಎಂದು ಹೇಳುತ್ತಾ ಅಲ್ಲಿಂದ ಕಾಲು ಕಿತ್ತಳು..

ದಡ ಬಡ ಅವಳ ಕೋಣೆಯತ್ತ ಹೆಜ್ಜೆ ಹಾಕಿದಳು.. "ತಡ ಆಗೋದು ನಿನ್ನಿಂದಾನೆ" ಎಂದಿತು ಅವಳ ಮನ..   

Monday, 18 April, 2011

ಆಟೋ ತತ್ವಗಳು

ನಾನು ಬೆಂಗಳೂರಿನ ಕಂಡ ಆಟೋ-(ಓಟ)ಗಳಲ್ಲಿ ಕೆಲವು ಆಟೋಗಳ ಹಿಂದೆ ನುಡಿ ಮುತ್ತುಗಳು/ ಅನುಭವ ಮಾತುಗಳು/ ಜ್ಞಾನೊದಯಗಳನ್ನು/ತತ್ವಗಳನ್ನು ಗಮನಿಸಿದೆ. ಕೆಲವು ನಗು ತರೆಸಿದರೆ, ಕೆಲವು ಯೋಚನೆ ಲಹರಿಯನ್ನು ಹುಟ್ಟು ಹಾಕಿತ್ತು..
ಅದರಲ್ಲಿ ಆಯ್ದ ಬರಹಗಳು ಹೀಗಿವೆ..
------------------------------------------------------------------------------------


ಎದೆ ಮುಟ್ಟಿದರೆ ಚಿನ್ನತೊಡೆ  ತಟ್ಟಿದರೆ  ಗುನ್ನ

ಇದ್ದರೆ ಇರಬೇಕು ಕವಿ, ಆದರೆ ಕೊರಿಬಾರದು ಕಿವಿ

ಮಚ್ಚಲ್ಲಿ ಬಿದ್ರೆ ಒಂದೇ ಏಟು, ಪ್ರೀತಿಲ್ಲಿ ಬಿದ್ರೆ ದಿನಾ ಏಟು

ಪ್ರೀತ್ಸೋದು ಇಷ್ಟ ಕಣೇ, ಹೇಳೋದು ಕಷ್ಟ ಕಣೇ

ನಾಟ್ಯ ರಾಣಿ, 90(Ninety) ರಾಜ

ವಾಹನದ ಹಿಂದೆ ಹೋದರೆ ಧೂಳು, ಹುಡುಗಿಯ ಹಿಂದೆ ಹೋದರೆ ಗೋಳು

ಹೆಣ್ಣೊಂದು ಬಣ್ಣದ ಚಿಟ್ಟೆ, ಅದರ ಹಿಂದೆ ಹೋದರೆ ಕೆಟ್ಟೆ

ಹುಡುಗಿಯ ನಗೆ, ಹುಡುಗನಿಗೆ ಹೊಗೆ

ಅವಳು ಕಂಡಳು ಸೋತೆ.. ಸಿಕ್ಕಳು ಸತ್ತೆ!

ಹಾರೋ ಹಕ್ಕಿಗೆ ಅಲಂಕಾರ, ಪ್ರೀತ್ಸೋ ಹುಡುಗಿಗೆ ದುರಹಂಕಾರ

ಹುಟ್ಟು ಉಚಿತ, ಸಾವು ಖಚಿತ, ಪ್ರೀತಿಯೊಂದೇ ಶಾಶ್ವತ
ಪ್ರೀತ್ಸಿದ್ರೆ ದಾಸ, ಇಲ್ಲದಿದ್ರೆ  ಗೂಸ.. 
ಪ್ರೀತಿಸುವ ಮುನ್ನ, ಯೋಚಿಸು ಚಿನ್ನ..

Believe a snake, Not a girl

--ಸಹನೆ-ಯಿಂದ

Wednesday, 13 April, 2011

ಮಕ್ಕಳನ್ನ ಆಡಿಸೊ ಪದಗಳು

ನಮ್ಮ ಹಿರಿಯರು ಮಕ್ಕಳನ್ನ ಆಡಿಸಲು ಬಹಳ ಹಾಡುಗಳು, ಪದಗಳು, ಜಾನಪದ ಗೀತೆಗಳನ್ನ ಕಟ್ಟಿದ್ದರು..
ನಮ್ಮ ಈಗಿನ ಜನಾಂಗ ಬದುಕು ಕಟ್ಟುವ ಆತುರತೆಯಲ್ಲಿ ಈ ಸುಮಧುರ ಹಾಗು ಮಗುವಿನ ಬೆಳವಣಿಗೆಗೆ ನೆರವಾಗುವ ಪದಗಳನ್ನ ಮರೆತಿದ್ದಾರೆ..

ನಾನು ನನ್ನ ಮಗಳಿಗಾಗಿ ಸ್ವಲ್ಪ ಮಟ್ಟಿಗೆ ಕಲೆತೆ.. ಅವಳು ಈ ಪದಗಳಿಗೆ ತಾನು ನಟಿಸಿದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ..
ನಿಮಗೆ ಇದರ ರಾಗ ಬೇಕಾದರೆ ಕೇಳಿ.. ಖಂಡಿತ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ..

ಈ ಹಾಡು ಹಾಡುತ್ತ.. ನಮ್ಮ ಕೈಯನ್ನು ಮುಚ್ಚಳ ತಿರುಗಿಸುವಾಗ ಮಾಡುವ ಹಾಗೆ ತಿರುಗಿಸ ಬೇಕು.. ೩-೫ ತಿಂಗಳ ಮಕ್ಕಳಿಗೆ ಇದನ್ನ ನೋಡೋದೇ ಖುಷಿ..


ತಾರಮ್ಮಯ್ಯ

ತಾರಮ್ಮಯ್ಯ ರಘುಕುಲ ರಾಮಚಂದಿರನ..
ತಾರಮ್ಮಯ್ಯ ಯದುಕುಲ ಬಾಲ ಕೃಷ್ಣನ್ನ..
ತಾರಕ್ಕಯ್ಯ.. ತಂದು ತೋರು ಅಕ್ಕಯ್ಯ..
------------------------------------------
ಈ ಪದವನ್ನು ಹಾಡುತ್ತ ಅಂಗೈಯನ್ನ ಮುಚ್ಚಿ ತೆಗೆದು ಮಾಡುತ್ತಿರಬೇಕು..೩-೫ ತಿಂಗಳ ಮಕ್ಕಳು ವಿಸ್ಮಯದಿಂದ ನೋಡುತ್ತವೆ.. ಮುಂದೆ ಅವೇ ಮಾಡುತ್ತವೆ..

ತಾ ತಾ ಗುಬ್ಬಿ

ತಾ ತಾ ಗುಬ್ಬಿ ತಾರೆ ಗುಬ್ಬಿ ತಾತಾ ಗುಬ್ಬಿ ತಾ
-------------------------------------------------
ಮಗುವನ್ನ ತೊಡೆಯ ಅಂಚಿನಲ್ಲಿ ಕೂಡಿಸಿಕೊಂಡು, ಎದೆಯ ಹತ್ತಿರ ಒಂದು ಕೈ ಹಿಡಿದು.. ಮಗುವಿನ ಕಾಲು ನೆಲಕ್ಕೆ ತಾಗುತ್ತಿರಬೇಕು.. ಮಗುವನ್ನು ಈ ಹಾಡು ಹೇಳುತ್ತಾ ಹಿಂದೆ ಮುಂದೆ ಮಾಡಬೇಕು.. ದೊಪ್ಪನೆ ಬಿತ್ತು ಎಂದಾಗ ನಮ್ಮ ತೊಡೆಯ ಮೇಲೆ ಮಲಗಿಸಿಕೊಳ್ಳಬೇಕು..
ಬೆನ್ನು ನಿಂತ ಮೇಲೇನೆ ಈ ಆಟ ಆಡಿಸಬೇಕು.. ೩-೪ ತಿಂಗಳಾದ ಮೇಲೆ ಎಂದು ಹೇಳಬಹುದು... ಮಗುವು ಹಿಗ್ಗಿನಲ್ಲಿ ತಾನೇ ಕಾಲಲ್ಲಿ ತಳ್ಳುತ್ತದೆ.. ಕಾಲಿಗೆ ಬಲ ಬರುತ್ತದೆ..


ದೂರಿ ದೂರಿ

ದೂರಿ ದೂರಿ ದುಂಡು ಪಾಪ
ನಾರಿಯರ ನಂದಗೋಪ
ಆರ ಮಕ್ಕಳ ತಂದನಮ್ಮ?
ಮನೆಗೆ ದೂರು ತಂದನಮ್ಮ
ದೂರಿ ದೂರಿ ದುಂಡು ತೋಳು
ದೂರಿ ದೂರಿ ಮಂಡೆ ಬೋಳು
ದೂರಿ ಆದಿ ಬಂತು ದೊಪ್ಪನೆ ಬಿತ್ತು...
--------------------------------------------
ಈ ಪದವು ಮಗು ಅಂಬೆಗಾಲು ಇಡುವಾಗ ಹೇಳಬಹುದು... ಒಮ್ಮೆ ನಾವು ತೋರಿಸಬೇಕಾಗುತ್ತದೆ.. ಅಂಬೆಗಾಲಿನಲ್ಲಿ ಕೂತು ಹಿಂದೂ ಮುಂದು ಹೋಗೋದು.. ಜಾಗ ಕದಲಬಾರದು..
ಆನೆ

೧)  ಆನೆ ಬಂತೊಂದು ಆನೆ..
      ಯಾವೂರಾನೆ?
     ಇಲ್ಲಿಗೇಕೆ ಬಂತು..
      ಹಾದಿ ತಪ್ಪಿ ಬಂತು..

೨)  ಆನೆ ಬಂತೊಂದು ಆನೆ
     ಏರಿ ಮೇಲೊಂದು ಆನೆ
     ನೀರು ಕುದಿತೊಂದು ಆನೆ
     ಹುಬ್ಬು ಹಾರಿಸ್ತು ಒಂದು ಆನೆ
     ಎಲ್ಲ ಆನೆ ಸಾಲಿಕ್ಕಿ ಬರುವಾಗ..
     ನೀನೆಲ್ಲಿದ್ದೆ.. ಪುಟ್ಟಾನೆ.. ಮರಿಯಾನೆ..
-------------------------------------------

ಇದು ಮಗು ಸುಮಾರು ೯-೧೦ ತಿಂಗಳಾದ ಮೇಲೆ ಆಡಿಸಬಹುದು.. ಒಂದು ಒಂದು ಎಂದು ಬಂದಾಗೆಲ್ಲ ಎಡಗೈಗೆ ಬಲಗೈಯ ಬೆರಳನ್ನು ಒಂದೊಂದಾಗಿ ತೋರಿಸುತ್ತ ಹೋಗುವುದು.. ಹೋಯ್ತು ಎಂದು ತಮಾಷೆಯಾಗಿ ತೋರಿಸಬೇಕು.. ದೊಡ್ಡ ಗಂಟು ಎಂದು ತಲೆ ಮೇಲೆ ಕೈ ಎತ್ತಿ ತೋರಿಸಬೇಕು.. ಮಗು ಹಾಗೆ ಮಾಡುವುದು ಕಲಿಯೋತ್ತೆ.. ನೋಡುವುದೇ ಒಂದು ಸಂಭ್ರಮ..

ಹಾಲಿಗೊಂದು ಕಾಸು

ಹಾಲಿಗೊಂದು ಕಾಸು..
ತುಪ್ಪಕ್ಕೊಂದು ಕಾಸು..
ಎಣ್ಣೆಗೊಂದು ಕಾಸು..
ಬೆಣ್ಣೆಗೊಂದು ಕಾಸು..
ಮೊಸರಿಗೊಂದು ಕಾಸು..
ಚಿಕ್ಕಪ್ಪ ಕೊಟ್ಟ ಕಾಸು ಪುಕ್ಕಟ್ಟೆ ಹೋಯ್ತು..
ಮಾವಯ್ಯ ಕೊಟ್ಟ ಕಾಸು ಮಾಯವಾಗಿ ಹೋಯ್ತು..
ಭಾವಯ್ಯ ಕೊಟ್ಟ ಕಾಸು ಬಾವಿಗೆ ಬಿತ್ತು..
ತಾತ್ಯ ಕೊಟ್ಟ ಕಾಸು ತೂತಾಗಿ ಹೋಯ್ತು..
ಅಪ್ಪಯ್ಯ ಕೊಟ್ಟ ಕಾಸು ದೊಡ್ಡ ಗಂಟು ಆಯ್ತು..
-------------------------------------------------------

ಮಗು ೮-೧೦ ತಿಂಗಳಾದಾಗ ಆಡಿಸುವ ಆಟ.. ಈ ಪದವನ್ನು ಹಾಡುತ್ತ ಹಿಂದಿಂದ ಮುಂದೆ ಕೈ ಬೀಸೋದನ್ನ ಹೇಳಿಕೊಡುವುದು..

ಕೈ ಬೀಸು

ಕೈ ಬೀಸಮ್ಮ ಕೈ ಬೀಸೆ..
ಹೊರಗೆ ಹೋಗೋಣ ಕೈ ಬೀಸೆ..
ತರಕಾರಿ ತರೋಣ ಕೈ ಬೀಸೆ..
ಮಿಠಾಯಿ ತರೋಣ ಕೈ ಬೀಸೆ..
ಕೈ ಬೀಸಮ್ಮ ಕೈ ಬೀಸೆ..

ಜೂಜು ಮಲ್ಲಿಗೆ

ಅಜೂಜು ಮಲ್ಲಿಗೆ..  ಜಾಜಿ ಸಂಪಿಗೆ..
ರಾಜ ತೇಜ ಮಗುವೆ ನನ್ನ ಗಾಜು ಗೊಂಬೆಯೇ..

ಓಲಾಡು

ಓಲಾಡಮ್ಮ  ಓಲಾಡೆ
ಪುಟ್ಟ ರಾಣಿಯೇ ಓಲಾಡೆ
ಸಿಂಗಾರ ಲಕ್ಷ್ಮಿಯೇ ಓಲಾಡು..
ಬುನ್ನಿಯ ಹಠ ಶುರು

ಬುನ್ನಿ  ಬಹಳ ಹಠ ಮಾಡೋದು ಕಲಿತಿದ್ದಾಳೆ. ನೆನ್ನೆಯ ಒಂದು ಘಟನೆಯೇ ಒಂದು ಉದಾಹರಣೆ.
ಒಂದು ಸೌತೆಕಾಯಿಯ ಒಂದು ಹೋಳನ್ನು ಹಿಡಿದು ಮನೆಯೆಲ್ಲಾ ಓಡಾಡುತ್ತ ತಿನ್ನುತ್ತಿದ್ದಳು. ಈಗೀಗ ಬಹಳ ಚಪ್ಪಲಿ ಬಿಡುವ ಜಾಗಕ್ಕೆ ಹೋಗುತ್ತಾಳೆ. ಅಲ್ಲಿ ಹೋಗಿ ಕೈಯಲ್ಲಿ ಇದ್ದ ಹೋಳನ್ನು ಕೆಳಗೆ ಹಾಕಿ ಚಪ್ಪಲಿ ಹಿಡಿಯಲು ಹೋದಳು. ಅಷ್ಟರಲ್ಲಿ ಅವಳ ಅಪ್ಪ ಅವಳನ್ನು ಹಿಡಿದು, ಅಳುತ್ತ ಬಿದ್ದಿದ್ದ ಸೌತೆಕಾಯನ್ನ ನನ್ನ ಕೈಯಲ್ಲಿ ಇಟ್ಟು, ಬಿಸಾಕು ಅಂದರು. 
ಸುದೀತಿಗೆ ಕೆಂಡಾಮಂಡಲ ಕೋಪ ಬಂತು. ಅಯ್ಯಾ.. ಯಾ.. ಅಂತ ಅರುಚೋಕ್ಕೆ ಶುರು ಮಾಡಿದಳು.. ಅವಳ ಅಪ್ಪ 
ಅಪ್ಪ:  ಬುನ್ನು, ಇಲ್ಲಿ ನೋಡು.. Keyyyy (ಅಲ್ಲಾಡಿಸುತ್ತ)
ಸುದೀತಿ: ಹಾ.. ತಾ.. (ಎಂದು ಅಳು ನಿಲ್ಲಿಸಿ ಕೈಯಲ್ಲಿ ಹಿಡಿತು)

-- ೨ ಘಳಿಗೆಯ ನಂತರ --

ಊಯಾಆಆ ವಯಾ...ಅಯಾ...  ನಮಗಂತೂ ಕಿವಿಯಿಂದ ರಕ್ತ ಬರೋದೊಂದು ಬಾಕಿ..  ಅಮ್ಮ ಅಷ್ಟೊತ್ತಿಗೆ ಇನ್ನೊಂದು ಸೌತೆಕಾಯನ್ನ ಕತ್ತರಿಸಿ ಅವಳ ಕೈಗೆ ಇಡುವವರೆಗೂ ನಮ್ಮ ಮನೆಯ ತಾರಸಿ ಅಷ್ಟು ಗಟ್ಟಿ ಇದೆ ಅಂತ ಗೊತ್ತಿರಲಿಲ್ಲ..