Tuesday 19 April, 2011

ನಿನಗಾಗಿಯೇ ಹಾಡಿದೆ

ಹೊರಗಿನ ಕಿರುಚಾಟ ಎಬ್ಬಿಸಿತು.. ಕನಸಿನ ಲೋಕದಿಂದ ಇಹ ಲೋಕಕ್ಕೆ ಕಾಲಿಟ್ಟಳು.. ಎದ್ದು ನೋಡಿದರೆ ಉಳಿದವರೆಲ್ಲ ಮಲಗಿದ್ದರು.. ಕೈಯಲ್ಲಿ cell ಹಿಡಿದು ಹೊರಗೆ ಹೋದಾಗ ಮನಸು "ಅವನು ಎದ್ದಿರಬಹುದಾ? " ಅಂತ ಕೇಳುತಿತ್ತು.. ಯಾಕೋ ತಡೆಯಲಾಗಲಿಲ್ಲ, ಅವನು ಗೆಳೆಯರೊಂದಿಗೆ ಇದ್ದ ಕೋಣೆಯ ಬಳಿ ಬಂದು ನೋಡಿದರೆ ಬಾಗಿಲು ಮುಚ್ಚಿತ್ತು.. ಅವಳ ಪಾಲಿಗೆ ಅವನ ಮನಸಿನ ಹಾಗೆ.. ಆ ಕೋಣೆಯಲ್ಲಾದರೂ  ಯಾರು ಇದ್ದಾರೆ  ಎಂದು ತಿಳಿದಿತ್ತು.. ಆದರೆ ಅವನ ಮನಸಿನಲ್ಲಿ?

ನಿರಾಶಳಾಗಿ ಪುನಃ ತನ್ನ ಕೋಣೆಯತ್ತ ಹೆಜ್ಜೆ ಹಾಕುತ್ತ  ಅವಳ ಮನಸ್ಸು ಮತ್ತು ಬುದ್ಧಿ ಮಾತಾಡುತಿತ್ತು..
ಮ:  ಅವನು ಎದ್ದಿದ್ದರೆ, ಸ್ವಲ್ಪ ಮಾತಾಡಬಹುದಿತ್ತು
ಬು: ಏನೆಂದು ಮಾತಾಡುತಿದ್ದೆ? ಸುಮ್ಮನೆ ಸಾಮಾನ್ಯ ವಿಷಯದ ಬಗ್ಗೆ ಚರ್ಚೆ. ಅದು ಯಾವಾಗಲಾದರೂ ಮಾಡಬಹುದು
ಮ: ನನ್ನ ಎದೆ ತುಡಿಯುತ್ತಿದೆ, ಅವನ ಮಾತಿಗೆ.. ಅವನು ನನಗೇನಾಗಬೇಕು..
ಬು: ನಿನಗೆ ಅವನು...

ಅಷ್ಟರಲ್ಲಿ "ಏನು ಇಷ್ಟು ಬೇಗ  ಎದ್ದುಬಿಟ್ಟಿದ್ದೀಯ ?" ಎಂಬುವ ಪ್ರಶ್ನೆ ಬಂತು.. ಹಿಂದೆ ತಿರುಗಿ ನೋಡಿದರೆ, ಜೊತೆಯಲ್ಲಿ ಓದಿದ ಮತ್ತೊಬ್ಬ ಗೆಳೆಯ. "ಹಾಂ.. ದಿನಾ ಬೇಗ ಏಳ್ತೀನಿ ನಾನು.. ಅಭ್ಯಾಸಬಲ.."

ಸರಿ.. ಮತ್ತೆ ಅವರ ಕೋಣೆಯತ್ತ ಕಳ್ಳಗನ್ನು ಹಾಯಿಸುವ ತವಕ ಪುಟಿದೆದ್ದಿತು ಅವಳಿಗೆ.. ಅವತ್ತಿನ ಪ್ರವಾಸ ವಿವರಗಳನ್ನು ಮಾತಾಡುತ್ತ ಕೋಣೆಯತ್ತ ಕಣ್ಣು ಹೋಯಿತು.. "ಛೆ! ಪಾಪಿ ಕತ್ತಲೆ, ಈ ಬಾರಿ ನೀನು ಕೈಯ್ಯ ಕೊಡಬೇಕಾ? ಇಷ್ಟೊಂದು ಜನ ಇಲ್ಲಿ ಯಾರು ಅವನು? " 

ಇಬ್ಬರು ಕಿಟಕಿ ಹತ್ತಿರ ಹೆಜ್ಜೆ ಹಾಕಿದರು.. ಹೊರಗೆ ಮಬ್ಬು ಕವಿದ ವಾತಾವರಣ, ಹಸಿರು ಹೊದ್ದ ಬೆಟ್ಟ, ಚಳಿ ಗಾಳಿ, ಹಕ್ಕಿಯ ಚಿಲಿಪಿಲಿ, ಮೋಡಗಳ ತೂಗಾಟ ಮನೋಹರ ಎನ್ನಿಸಿತು.. ಸ್ವಲ್ಪ ಹೊತ್ತು ಮಾತಾಡಿ, ಸ್ನಾನ ಮಾಡಿ ಬರುತ್ತೇನೆಂದು ಹೋದ.. 
ಅವಳಿಗೆ ಆ ವಾತಾವರಣದಲ್ಲಿ ಹಾಡು ಹಾಡ ಬಯಸಿತು.. ಮೆಲು ದನಿಯಲ್ಲಿ ಹಾಡಲು ಆರಂಭಿಸಿದಳು.. ಸಾಕಷ್ಟು ಹಾಡಿ, ಈಗಲಾದರು ಹೊರಡುತ್ತೀನಿ ಸ್ನಾನಕ್ಕೆ ೬.೦೦ ಆಗುತ್ತಾ ಬಂತು ಎಂದು ತಿರುಗಬೇಕು ಇನ್ನೇನು.. ಅವನು ಕಂಡನು!

ಅವಳ ಎದೆ ಬಡಿತ ಹೆಚ್ಚಿತು, "ಏನು ಮಾಡಲಿ? ಏನು ಮಾತಾಡೋದು? ಯಾರಾದರು ನಾವಿಬ್ಬರೇ ಮಾತಾಡೋದು ನೋಡಿ ತಪ್ಪು ತಿಳಿದರೆ? " ಅವನನ್ನು ನೋಡಲೇ ಇಲ್ಲವೇನೋ ಎನ್ನುವ ಹಾಗೆ, ಕಿಟಕಿಯ ಬಳಿ ಮತ್ತೆ ಹೆಜ್ಜೆ ಹಾಕುತ್ತ.. "ಎಲ್ಲಿ ಜಾರಿತೋ ಮನವು.." ಮೆಲು ದನಿಯಲ್ಲಿ ಹಾಡಲು ಶುರು ಮಾಡಿದಳು..

"ಅವನು ಹತ್ತಿರ ಬರುತಿದ್ದಾನೆ, ಎನೆನ್ನಬಹುದು? ಚನ್ನಾಗಿ ಹಾಡುತ್ತೀಯ.. ? ಯಾವಾಗಿಂದ ಕಲಿತದ್ದು..? "
ಅವನು ಬಂದೆ ಬಿಟ್ಟ, ಅವಳಿಗೋ ಉಸಿರು ಒಂದು ಕ್ಷಣ ಇಲ್ಲದಂತಾಯಿತು, ಹಿಂದಿನಿಂದ ಏನಾದರೂ ಕೀಟಲೆ ಮಾಡಿದರೆ ಅಂತ ಯೋಚಿಸುವುದರಲ್ಲಿ ಅವಳ ಹಾಡು ನಿಂತಿತ್ತು, ಅವನ ಮುಖದ ಮುಂದೆ ಅವಳ ಮುಖವಿತ್ತು..

"ಯಾವ ಹಾಡು?" ಎಂದ.. "ಯಾವುದೊ ಗೊತ್ತಿಲ್ಲ.. ಎದ್ದಿದ್ದು ಇಗಲೇನ? ನಿಮ್ಮ ಗೆಳೆಯ ಇಷ್ಟು ಹೊತ್ತು ಇಲ್ಲೇ ಇದ್ದ.. ಮಾತಾಡ್ತಿದ್ವಿ"  ಎಂದು ಒಂದೇ ಸಮ ನೀರು ಸುರಿದ ಹಾಗೆ ಮಾತಾಡಿದಳು..

ಅವನು ತುಸು ನಕ್ಕು.. "ಯಾವ ಹಾಡು ಹಾಡ್ತಿದ್ದಿರಿ ಹೇಳಿ? ಮಾತು ಮರಿಸಬೇಡಿ" ಅವಳಿಗೇಕೋ ಬಹಳ ನಾಚಿಕೆಯಾಯಿತು.. "ಥೂ.. ಯಾಕಾದರೂ ಹಾಡಬೇಕಿತ್ತು.." ಮನಸ್ಸು ಹೇಳಿದ್ದು ಬುದ್ಧಿ ಕೇಳಲ್ಲ.. ಬುದ್ಧಿ ಹೇಳಿದ್ದು ಮನಸು ಕೇಳಲ್ಲ.. 

"ಈಗೇನು ಹೇಳುತ್ತಿರ ಇಲ್ಲವೋ ?" ಎಂದು ಜೋರು ಮಾಡಿದಾಗಂತೂ ಅವಳಿಗೆ ಎದೆ ತುಸುಕ್ ಎಂದಿತು.. "ಜೋಗಿ ಜಂಗಮರೆ.. ಅಂತ ಅದೊಂದು ಭಾವ ಗೀತೆ.. ಸ್ನಾನ ಮಾಡಿ ತಾಯರಾಗೋಣ.. ತಡ ನಮ್ಮಿಂದ ಆಗೋದು ಬೇಡ" ಎಂದು ಹೇಳುತ್ತಾ ಅಲ್ಲಿಂದ ಕಾಲು ಕಿತ್ತಳು..

ದಡ ಬಡ ಅವಳ ಕೋಣೆಯತ್ತ ಹೆಜ್ಜೆ ಹಾಕಿದಳು.. "ತಡ ಆಗೋದು ನಿನ್ನಿಂದಾನೆ" ಎಂದಿತು ಅವಳ ಮನ..   

1 ಅನಿಸಿಕೆ ಅಭಿಪ್ರಾಯ: